ನಾಪೋಕ್ಲು, ಮಾ. 10: ಅಂತರರಾಷ್ಟ್ರೀಯ ಬೆಳೆಯಾಗಿರುವ ಕಾಫಿಗೆ ಉತ್ತಮ ಬೆಲೆ ಸಿಗಬೇಕಾದರೆ ಗುಣಮಟ್ಟವನ್ನು ಕಾಯ್ದುಕೊಳ್ಳುವದು ಬಹಳ ಮುಖ್ಯ. ದೇಶದ ಶೇ. 40 ಭಾಗ ಕಾಫಿ ಉತ್ಪಾದನೆ ಮಾಡುವ ಕೊಡಗಿಗೆ ಕಾಫಿಯೇ ಬೆನ್ನೆಲುಬು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಫಿ ಮಂಡಳಿ ಕೋಮಾ ಸ್ಥಿತಿಯಲ್ಲಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದರು.
ಕಾಫಿ ಮಂಡಳಿ ವಿಸ್ತರಣಾ ವಿಭಾಗದ ವತಿಯಿಂದ ಪಾರಾಣೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಲಾಗಿದ್ದ ಸಮೂಹ ಸಂಪರ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎರಡು ವರ್ಷದಿಂದ ಕಾಫಿ ಮಂಡಳಿಯ ಸಭೆ ನಡೆದಿಲ್ಲ. ಕಾಫಿ ಮಂಡಳಿಗೆ ನಿಗದಿತ ಅಧ್ಯಕ್ಷ ಕಾರ್ಯದರ್ಶಿ ಇಲ್ಲದೆ ಇಲಾಖೆ ಬಡವಾಗಿದೆ. ಬೆಳೆಗಾರರ ಸಮಸ್ಯೆ ಚರ್ಚಿಸಲು ಮಂಡಳಿ ಸಭೆ ನಡೆಸುತ್ತಿಲ್ಲ ಎಂದು ಅವರು ದೂರಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಫಿ ಮಂಡಳಿ ಜಂಟಿ ನಿರ್ದೇಶಕ ಟಿ.ಸಿ. ಹೇಮಂತ್‍ಕುಮಾರ್ ಮಾತನಾಡಿ, ಬೆಳೆಗಾರರು ಸ್ವಸಹಾಯ ಸಂಘ ರಚಿಸಿಕೊಂಡು ಅದರ ಮೂಲಕ ಮಂಡಳಿಯಿಂದ ಸಿಗುವ ಸಬ್ಸಿಡಿ ಪಡೆದು ಕಾಫಿ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಎಂದರು. ಅಪ್ಪಂಗಳ ಕೃಷಿ ವಿಜ್ಞಾನ ಕೇಂದ್ರದ ಡಾ. ಅಂಕೇಗೌಡ ಕಾಳು ಮೆಣಸು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕಾಫಿ ಸಂಶೋಧನಾ ಉಪಕೇಂದ್ರ ಚೆಟ್ಟಳ್ಳಿಯ ವಿಜ್ಞಾನಿಗಳು ಕಾಫಿ ಬೆಳೆಯಲ್ಲಿ ರಸಗೊಬ್ಬರಗಳ ಬಳಕೆ, ರೋಗಗಳ ನಿರ್ವಹಣೆ, ಕೀಟಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಅತಿಥಿಗಳಾಗಿ ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೋಚಮಂಡ ವನಿತಾ ತಮ್ಮಯ್ಯ, ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೊಳಕಾರಂಡ ಮಂದಣ್ಣ, ಮಡಿಕೇರಿ ವಲಯ ಉಪನಿರ್ದೇಶಕ ರಾಮಗೌಂಡರ್ ಹಾಗೂ ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ಬೊಪ್ಪಂಡ ಕೆ. ಪೂಣಚ್ಚ ಉಪಸ್ಥಿತರಿದ್ದರು.
-ದುಗ್ಗಳ