ನಕ್ಸಲ್ ಧಾಳಿಗೆ 11 ಸಿಆರ್‍ಪಿಎಫ್ ಯೋಧರು ಬಲಿ ಛತ್ತೀಸ್‍ಗಡ, ಮಾ. 11: ಛತ್ತೀಸ್‍ಗಡದ ಸುಕ್ಮಾದ ಬೇಜಾ ಬಳಿ ಸಿಆರ್‍ಪಿಎಫ್ ಯೋಧರ ಮೇಲೆ ನಕ್ಸಲರು ಗುಂಡಿನ ಧಾಳಿ ನಡೆಸಿದ ಪರಿಣಾಮ 11 ಯೋಧರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಏಕಾಏಕಿ ನಕ್ಸಲರು ಸಿಆರ್‍ಪಿಎಫ್ ಯೋಧರ ಮೇಲೆ ಗುಂಡಿನ ಧಾಳಿ ನಡೆಸಿದ್ದರಿಂದ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಐಜಿ ಸುಂದರ್ ರಾಜ್ ಹೇಳಿದ್ದಾರೆ. ಪೆÇಲೀಸರಿಗೆ ಮಾಹಿತಿ ನೀಡುತ್ತಿರುವ ಶಂಕೆ ಮೇಲೆ ನಿನ್ನೆ ಸುಕ್ಮಾ ಜಿಲ್ಲೆಯಲ್ಲಿ ಮಾಜಿ ಸರ್ಪಂಚ್‍ರನ್ನು ನಕ್ಸಲರು ಹತ್ಯೆ ಮಾಡಿದ್ದರು.

ಲಂಕಾದಿಂದ 77 ಭಾರತೀಯ ಮೀನುಗಾರರ ಬಿಡುಗಡೆ

ನವದೆಹಲಿ, ಮಾ. 11: ಓರ್ವ ಭಾರತೀಯ ಮೀನುಗಾರನನ್ನು ಬಲಿ ಪಡೆದ ಗುಂಡಿನ ಧಾಳಿ ಪ್ರಕರಣ ಸಂಬಂಧ ಕಳೆದ ಶನಿವಾರ ಬಂಧನಕ್ಕೊಳಗಾಗಿದ್ದ 85 ಭಾರತೀಯ ಮೀನುಗಾರರ ಪೈಕಿ 77 ಮೀನುಗಾರರನ್ನು ಶನಿವಾರ ಶ್ರೀಲಂಕಾ ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಮೀನುಗಾರರು ಸದ್ಯ ಜಫ್ನಾದಲ್ಲಿದ್ದು, ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ. ಆದರೆ ಜಪ್ತಿ ಮಾಡಿರುವ ಮೀನುಗಾರರ ಬೋಟ್‍ಗಳು ಶ್ರೀಲಂಕಾದಲ್ಲಿ ಉಳಿಯಲಿವೆ. 85 ಭಾರತೀಯ ಮೀನುಗಾರರ ಪೈಕಿ 77 ಮಂದಿಯನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಉಳಿದ ಮೀನುಗಾರರನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲಾಯ್ ತಿಳಿಸಿದ್ದಾರೆ. ಶ್ರೀಲಂಕಾ ನೌಕಾಪಡೆ ಭಾರತೀಯ ಮೀನುಗಾರನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಮಂಗಳೂರು ಜೈಲಿನಿಂದ ವಿಚಾರಣಾಧೀನ ಖೈದಿ ಪರಾರಿ

ಮಂಗಳೂರು, ಮಾ. 11: ಪೆÇಲೀಸರ ಬಿಗಿ ಭದ್ರತೆಯ ನಡುವೆಯೂ ವಿಚಾರಣಾಧೀನ ಖೈದಿಯೊಬ್ಬ ಮಂಗಳೂರು ಜೈಲಿನಿಂದ ಇಂದು ಮುಂಜಾನೆ ಪರಾರಿಯಾಗಿದ್ದಾನೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಿವಾಸಿ ಜಿನ್ನಪ್ಪ ಎಂಬ ಅತ್ಯಾಚಾರ ಆರೋಪಿ ಪರಾರಿಯಾಗಿದ್ದಾನೆ. 2015 ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಈತನ ವಿರುದ್ಧ ಉಪ್ಪಿನಂಗಡಿ ಪೆÇಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಧರ್ಮಸ್ಥಳ ಪೆÇಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಜಿಲ್ಲಾ ಕಾರಾಗೃಹದಲ್ಲಿ ಈತನಿಗೆ ಅಡುಗೆ ಸಹಾಯಕನ ಕೆಲಸಕ್ಕೆ ನೇಮಿಸಲಾಗಿತ್ತು. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಡುಗೆ ಮನೆಯಲ್ಲಿ ಕೆಲಸ ಮಾಡುವ ಖೈದಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿತ್ತು, ಈ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಜಿನ್ನಪ್ಪ ಮೂರು ಮಹಿಳೆಯರನ್ನು ವಿವಾಹವಾಗಿದ್ದ. ಈತನ ಪತ್ತೆಗಾಗಿ ಪೆÇಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಭೀಕರ ರಸ್ತೆ ಅಪಘಾತದಲ್ಲಿ 11 ಸಾವು

ಪುಣೆ, ಮಾ. 11: ಪುಣೆ-ಸೋಲಾಪುರ ಹೆದ್ದಾರಿಯಲ್ಲಿ ಶನಿವಾರ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ 11 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಕೋರೆಗಾಂವ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮೃತ ಯಾತ್ರಾರ್ಥಿಗಳು ಬಸ್‍ನಲ್ಲಿ ಸೋಲಾಪುರ ಜಿಲ್ಲೆಯ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ಪೆÇಲೀಸರು ಹೇಳಿದ್ದಾರೆ. ಅಪಘಾತದಲ್ಲಿ ಬಸ್ ಚಾಲಕ ಹಾಗೂ 10 ಮಂದಿ ಯತ್ರಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಮುಂಬೈ ಹೊರವಲಯದ ಮುಳುಂದ್ ನಿವಾಸಿಗಳಾಗಿದ್ದಾರೆ.