ಮಡಿಕೇರಿ, ಮಾ. 10: ಕಸ್ತೂರಿ ರಂಗನ್ ವರದಿ ಹಿನ್ನೆಲೆ ಪಶ್ಚಿಮಘಟ್ಟ ಅರಣ್ಯ ಸುರಕ್ಷಾ ವ್ಯವಸ್ಥೆಯಲ್ಲಿ ಕೊಡಗು ಜಿಲ್ಲೆಯನ್ನು ಸೂಕ್ಷ್ಮ ಅರಣ್ಯ ವನ್ಯಜೀವಿ ವಲಯವೆಂದು ಕಾನೂನು ಜಾರಿಗೊಳಿಸದಂತೆ ಆಗ್ರಹಿಸಿ; ಕೇಂದ್ರ ಸರಕಾರದ ಬಳಿ ಪಕ್ಷಾತೀತ ನಿಯೋಗ ತೆರಳಿ ಜಿಲ್ಲೆಯ ವಾಸ್ತವ ಕುರಿತು ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಇಂದು ನಗರದಲ್ಲಿ ಈ ಸಂಬಂಧ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ; ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಮುಖರು ಮೇಲಿನ ತೀರ್ಮಾನ ಕೈಗೊಂಡರು. ರಾಜ್ಯ ಸರಕಾರದಿಂದ ಕೇಂದ್ರದ ಮೇಲೆ ಒತ್ತಡ ಹೇರುವದು ಸೇರಿದಂತೆ ಮಲೆನಾಡು ಜಿಲ್ಲೆಗಳ ಜನಪ್ರತಿನಿಧಿಗಳು ಒಗ್ಗೂಡಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಮಾಲೋಚಿಸಿ ದಿಟ್ಟ ನಿರ್ಧಾರ ಕೈಗೊಳ್ಳಲು ನಿರ್ಣಯಿಸಲಾಯಿತು.

ಕೊಡಗಿನ ಅಸ್ತಿತ್ವಕ್ಕಾಗಿ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸಾರ್ವಜನಿಕ ವಲಯದಿಂದ ನ್ಯಾಯಾಂಗದ ಮೂಲಕ ಕಾನೂನು ಹೋರಾಟ ನಡೆಸುವ ದಿಸೆಯಲ್ಲಿ ನಿರ್ಧಾರ ಪ್ರಕಟಿಸಲಾಯಿತು.

ಇಲ್ಲಿನ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ; ಪ್ರಸಕ್ತ ಕೇಂದ್ರ ಸರಕಾರ ಈ ಸಂಬಂಧ ಹೊರಡಿಸಿರುವ ಕರಡು ಪ್ರಸ್ತಾವನೆಯ ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಿ ಮೇಲಿನ ನಿರ್ಣಯ ತೆಗೆದುಕೊಳ್ಳಲಾಯಿತು. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ; ಕೊಡಗಿನ ಗಂಭೀರವಾದ ಈ ಸಮಸ್ಯೆಯನ್ನು ಮನವರಿಗೆ ಮಾಡಿದ್ದು, ಸದ್ಯವೇ ಅವರುಗಳು ಪ್ರಧಾನಿ ಮೋದಿ ಅವರನ್ನು ಖುದ್ದು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಯತ್ನಿಸಲಿರುವದಾಗಿ ಮಾತು ಕೊಟ್ಟಿದ್ದಾರೆ ಎಂದು ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಸಭೆಗೆ ತಿಳಿಸಿದರು.

ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಬಂದಲ್ಲಿ 6 ರಾಜ್ಯಗಳು ಇಕ್ಕಟ್ಟಿಗೆ ಸಿಲುಕಲಿದ್ದು, ಈ ಬಗ್ಗೆ ಕೇರಳ ರಾಜ್ಯ ಪೂರ್ಣ ಪ್ರಮಾಣದಲ್ಲಿ ಎಚ್ಚೆತ್ತುಕೊಂಡಿದೆ; ಕರ್ನಾಟಕ ರಾಜ್ಯದಲ್ಲಿ ಕೊಡಗಿನಲ್ಲಿ

(ಮೊದಲ ಪುಟದಿಂದ) ಮಾತ್ರ ಹೋರಾಟ ನಡೆದಿದ್ದು, ಇತರೆಡೆಯ ಮೌನದಿಂದಾಗಿ ಯಶಸ್ಸಿನಲ್ಲಿ ಹಿನ್ನೆಡೆಯಾಗಿದೆ ಎಂದು ಕೆ.ಜಿ. ಬೋಪಯ್ಯ ವಿವರಿಸಿದರು. ರಾಜಕೀಯ ಹೋರಾಟದೊಂದಿಗೆ, ನ್ಯಾಯಾಲಯದಲ್ಲಿ ಜಿಲ್ಲೆಯ ಪರವಾಗಿ ಹಿರಿಯ ವಕೀಲರ ಮೂಲಕವೂ ಹೋರಾಟ ನಡೆಸಬೇಕಾದ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು.

ಈ ಒಂದು ಗಂಭೀರ ಸಮಸ್ಯೆ ಬಗ್ಗೆ ಇದೀಗ ನಡೆಯುತ್ತಿರುವ ವಿಧಾನ ಮಂಡಲ ಸಭೆಗಳಲ್ಲೂ ಪ್ರಸ್ತಾಪಿಸುತ್ತೇವೆ ಎಂದು ಹೇಳಿದ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಉಸ್ತವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳ ಭೇಟಿ ಹಾಗೂ ಸಂಬಂಧಿತ ಶಾಸಕರುಗಳ ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳುತ್ತೇವೆ ಎಂದರು. ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಸಲ್ಲಿಸಿರುವ ವರದಿಯೇ ಲಭ್ಯವಾಗದ್ದರಿಂದ, ಅದನ್ನು ವಿಧಾನಸಭೆಯಲ್ಲಿ ಪ್ರಶ್ನಿಸಿ, ಮುಂದಿನ ಹೋರಾಟಕ್ಕೆ ಹೆಜ್ಜೆ ಇಡಲಾಗುವದು ಎಂದು ಹೋರಾಟ ಸಮಿತಿ ಅಧ್ಯಕ್ಷರೂ ಆದ ರಂಜನ್ ವಿವರಿಸಿದರು.

ಪರಿಸರವಾದಿಗಳು ಹಾಗೂ ಅರಣ್ಯಾಧಿಕಾರಿಗಳ ಕುತಂತ್ರಕ್ಕೆ ಕೊಡಗಿನ ಜನತೆ ಬಲಿಯಾಗದೆ ಹೋರಾಟದಲ್ಲಿ ಧುಮುಕುವಂತೆ ಅವರು ಕರೆ ನೀಡುತ್ತಾ; ಕೊಡಗಿನ ಹಿತಕ್ಕಾಗಿ ತಾವು ಎಲ್ಲ ರೀತಿಯಿಂದ ಆಂದೋಲನದಲ್ಲಿ ತೊಡಗಿಸಿಕೊಳ್ಳುವದಾಗಿ ಘೋಷಿಸಿದರು.

ವೀಣಾ ಬೆಂಬಲ : ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಸಭೆಯಲ್ಲಿ ಮಾತನಾಡುತ್ತಾ; ಕೇಂದ್ರ - ರಾಜ್ಯ ಸರಕಾರಗಳತ್ತ ಬೊಟ್ಟು ಮಾಡುವ ಬದಲಿಗೆ ಸಮಸ್ಯೆ ಇತ್ಯರ್ಥಗೊಳಿಸಲು ಜನತೆಯ ಹಿತಕ್ಕಾಗಿ ಒಗ್ಗೂಡಿ ಹೋರಾಟ ನಡೆಸಲು ಎಲ್ಲ ರೀತಿ ಬೆಂಬಲ ಘೋಷಿಸಿದರು.

ಅರುಣ್ ಮಾಚಯ್ಯ : ವಿಧಾನ ಪರಿಷತ್ ಮಾಜೀ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಅವರು ಕೂಡ ಜಿಲ್ಲೆಯ ಹಿತದೃಷ್ಟಿಯಿಂದ ಪಕ್ಷಾತೀತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಪ್ರಕಟಿಸಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಅವರು ಅಭಿಪ್ರಾಯ ವ್ಯಕ್ತಪಡಿಸಿ ಟಿ.ಪಿ. ರಮೇಶ್ ಪಕ್ಷಾತೀತ ಹೋರಾಟ ಹಾಗೂ ನ್ಯಾಯಾಂಗದ ಮೊರೆ ಹೋಗಿ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬೇಕಿದೆ ಎಂದರು. ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕತ್ತಲೆಯಲ್ಲಿಟ್ಟು ವರದಿಯ ಜಾರಿಗೆ ಯತ್ನಿಸುತ್ತಾರೆ ಎಂದು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಣ್ಣ ಬೆಳೆಗಾರರ ಹೋರಾಟ ಸಮಿತಿ ಸಂಚಾಲಕ ಚೇರಂಡ ನಂದಾ ಸುಬ್ಬಯ್ಯ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ 3ನೇ ಅಧಿಸೂಚನೆಯಿಂದ ಕೊಡಗಿನ ಅಸ್ಥಿತ್ವಕ್ಕೆ ಧಕ್ಕೆ ಉಂಟಾಗಲಿದ್ದು, ಅಧಿಕಾರ ವರ್ಗ, ಡೋಂಗಿ ಪರಿಸರವಾದಿಗಳೊಂದಿಗೆ ಕೈಜೋಡಿಸಿ ಈ ವರದಿಯ ಅನುಷ್ಠಾನಕ್ಕೆ ಯತ್ನಿಸುತ್ತಿದೆ ಎಂದರು. ಸಾಮಾಜಿಕ ಜಾಲತಾಣಗಳನ್ನು ಬಳಸಿ ಪರಿಸರವಾದಿಗಳು ಪ್ರತಿನಿತ್ಯ ಜನರ ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಬೇಕಾಗಿದೆ ಎಂದರು. ಫೆಬ್ರವರಿ 27ಕ್ಕೆ ಕರಡು ಪ್ರತಿ ತಯಾರಾಗಿ ಜನಾಭಿಪ್ರಾಯಕ್ಕೆ ಕೇವಲ 60 ದಿನಗಳ ಕಾಲಾವಕಾಶ ನೀಡಲಾಗಿದೆ; ಇನ್ನು 49 ದಿನಗಳು ಮಾತ್ರ ಉಳಿದುಕೊಂಡಿದ್ದು, ಹೋರಾಟಕ್ಕೆ ಶೀಘ್ರ ಚಾಲನೆ ನೀಡಬೇಕೆಂದರು.

‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅವರು ಮಾತನಾಡಿ, ವರದಿಗೆ ಸಂಬಂಧಿಸಿ ಕೊಡಗಿನ ಜನತೆ ಪರ ಇದುವರೆಗಿನ ಹೋರಾಟಕ್ಕೆ ಎಲ್ಲಿ ಹಿನ್ನಡೆಯಾಗಿದೆ ಅಥವಾ ದಾರಿ ತಪ್ಪಿಸಲು ಯಾರು ಕಾರಣ ತಿಳಿದುಕೊಂಡು, ಈಗಿನ ಸನ್ನಿವೇಶದಲ್ಲಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯುವಂತೆ ಸಲಹೆ ನೀಡಿದರು.ಜೆಡಿಎಸ್ ವಕ್ತಾರ ಭರತ್‍ಕುಮಾರ್, ಬಿಜೆಪಿಯ ವೀರಾಜಪೇಟೆ ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ, ಕುಡಿಯರ ಮುತ್ತಪ್ಪ ಮೊದಲಾದವರು ಹೋರಾಟಕ್ಕೆ ಬೆಂಬಲಿಸಿ ಅಭಿಪ್ರಾಯ ಹಂಚಿಕೊಂಡರು.

ನ್ಯಾಯಾಂಗ ಹೋರಾಟಕ್ಕೆ ಒತ್ತು : ಹೋರಾಟ ಸಮಿತಿ ಸಂಚಾಲಕ ತೀತಿರ ಧರ್ಮಜ ಕೊಡಗಿನ ಹಿತಕ್ಕಾಗಿ ನ್ಯಾಯಾಂಗ ವ್ಯವಸ್ಥೆಯಡಿ ಕಾನೂನು ಹೋರಾಟ ಕುರಿತು ಸಲಹೆ ಮಾಡಿದರು.

ಸಭೆಯಲ್ಲಿ ವಿವಿಧ ಪ್ರಮುಖರಾದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ, ಕೆ.ಎಂ. ಲೋಕೇಶ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್, ಕಾಳನ ರವಿ, ಟಾಟು ಮೊಣ್ಣಪ್ಪ, ಶ್ಯಾಮ, ಅರುಣ್ ಭೀಮಯ್ಯ, ತೆನ್ನೀರ ಮೈನಾ, ರವಿ ಬಸಪ್ಪ ಮೊದಲಾದವರು ಭಾಗವಹಿಸಿದ್ದರು.