ಮಡಿಕೇರಿ, ಮಾ. 10: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಸ್ಪಷ್ಟ ಬಹುಮತವಿಲ್ಲದೆ ನಗರಸಭಾ ಆಡಳಿತ ತ್ರಿಶಂಕು ಸ್ಥಿತಿಯಲ್ಲಿದೆ. ಹಾಗಾಗಿ ಇಲ್ಲಿ ಎಸ್‍ಡಿಪಿಐ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ‘ಆಟಕ್ಕುಂಟು -ಲೆಕ್ಕಕ್ಕಿಲ್ಲ!' ಎಂಬಂತೆ ಎಂದು ಆ ಸದಸ್ಯರುಗಳೇ ಅಸಹಾಯಕ ನುಡಿಯಾಡು ವಂತಾಗಿದೆ.

ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‍ಗೆ ಬಹುಮತ ಇಲ್ಲದಿದ್ದರೂ ಕೂಡ ಬಾಹ್ಯ ಬೆಂಬಲ ನೀಡುತ್ತಿರುವ ಎಸ್.ಡಿ.ಪಿ.ಐ. ಸದಸ್ಯರ ಒತ್ತಡದಲ್ಲಿ ಸಂಬಂಧಪಟ್ಟವರು ಕಾರ್ಯನಿರ್ವಹಿಸುತ್ತಾ, ಜಿಲ್ಲಾ ಉಸ್ತುವಾರಿ ಸಚಿವರು ಪರಿಸ್ಥಿತಿ ಅನುಸರಿಸಿ ಚಾಣಾಕ್ಷತನದ ಹೆಜ್ಜೆ ಇಡುತ್ತಿದ್ದು, ಆದ್ಯತೆ ಮೇರೆಗೆ ಎಸ್.ಡಿ.ಪಿ.ಐ. ಸದಸ್ಯರಿಗೆ ಸ್ಪಂದಿಸುತ್ತಿದ್ದಾರೆ ಎಂಬದು ಕಾಂಗ್ರೆಸ್ಸಿಗರ ಅಂಬೋಣ.

ಹೀಗಿದ್ದರೂ ತಲೆ ಎಣಿಕೆಯಲ್ಲೇ ಆಡಳಿತ ನಡೆಸಬೇಕಿದೆ ಎಂಬದು ವಾಸ್ತವ. ಪ್ರಸಕ್ತ ನಗರಸಭೆಯೊಳಗೆ ಕಾಂಗ್ರೆಸ್ ಸದಸ್ಯರ ಬಲ 8ಕ್ಕೆ ಕುಸಿದಿದೆ. ವಿಪಕ್ಷ ಬಿಜೆಪಿ ಕೂಡ ಅಷ್ಟೇ ಸಂಖ್ಯಾಬಲ (8) ಹೊಂದಿದೆ.

ಉಳಿದಂತೆ ಒಂದು ರೀತಿ ಸ್ವತಂತ್ರರಾಗಿರುವ ಇನ್ನೋರ್ವ ಸದಸ್ಯೆ ಸಂಗೀತಾ ಪ್ರಸನ್ನ ಕಳೆದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಬಳಿಕ ಬಿಜೆಪಿಯೊಂದಿಗೆ ಗುರುತಿಸಿಕೊಂಡು, ಬಿಜೆಪಿ ಇಲ್ಲಿ 9ಕ್ಕೆ ತೃಪ್ತಿಪಟ್ಟುಕೊಳ್ಳಲಿದೆ.

ಇತ್ತ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಾಂಗ್ರೆಸಿನ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಇವರಿಬ್ಬರ ಸದಸ್ಯತ್ವ ಅನರ್ಹಗೊಂಡಿರುವ ಪರಿಣಾಮ, ನಗರಸಭೆಯೊಳಗೆ ಈ ಸ್ಥಾನಗಳು ಸದ್ಯ ಲೆಕ್ಕಕ್ಕಿಲ್ಲ.

ಕಾಂಗ್ರೆಸ್ ಸ್ವಂತ ನೆಲೆಯಲ್ಲಿ 8 ಸ್ಥಾನದೊಂದಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಬೆಂಬಲದಿಂದ 9ಕ್ಕೆ ಏರಿದರೂ ಮತ್ತೆ ಬಹುಮತದ ಹಂತಕ್ಕೆ ಎಸ್‍ಡಿಪಿಐನ ನಾಲ್ವರು ಸದಸ್ಯರೇ ಇಲ್ಲಿ ನಿರ್ಣಾಯಕ ಎನ್ನುವಂತಾಗಿದೆ.

ವಿಪಕ್ಷ ಬಿಜೆಪಿ ನಗರಸಭೆಯೊಳಗೆ ಓರ್ವ ಅನ್ಯ ಸದಸ್ಯರ ಬೆಂಬಲದಿಂದ 9 ಸಂಖ್ಯಾಬಲ ಹೊಂದಿದ್ದು, ಓರ್ವ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಒಬ್ಬರ ಸಹಿತ ಸಂಸದರ ಬೆಂಬಲ ಪಡೆದರೂ, ಈ ಸಂಖ್ಯೆ 12ಕ್ಕೆ ಸೀಮಿತವಾಗಲಿದೆ.

ಪರಿಣಾಮ ನಗರಸಭೆಯ ಆಡಳಿತವು ಮೇಲ್ನೋಟಕ್ಕೆ ಕಾಂಗ್ರೆಸ್ ಕೈಯಲ್ಲಿದ್ದರೂ, ಎಸ್‍ಡಿಪಿಐ ಅಣತಿಯಂತೆಯೇ ಕಾರುಬಾರು ನಡೆಯುತ್ತಿರುವದಾಗಿ, ಆಡಳಿತ ಸದಸ್ಯರು ಮುಜುಗರಪಡುತ್ತಿದ್ದಾರೆ.

ಈ ನಡುವೆ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ತಮ್ಮ ಅನರ್ಹತೆ ಬಗ್ಗೆ ಸಲ್ಲಿಸಿರುವ ಮೇಲ್ಮನವಿ ತೀರ್ಪು ಉಚ್ಚ ನ್ಯಾಯಾಲಯದಿಂದ ಹೊರಬೀಳದ ಹೊರತು ಯಾವ ತೀರ್ಮಾನಕ್ಕೂ ಬರುವಂತಿಲ್ಲ. ಅಲ್ಲಿ ತನಕ ಜಿಲ್ಲಾ ಕೇಂದ್ರದಲ್ಲಿ ತ್ರಿಶಂಕು ಆಡಳಿತವಷ್ಟೇ.