ಮಡಿಕೇರಿ, ಮಾ. 11: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರಿಗೆ ಜೈಕಾರ ಮೊಳಗಿಸಿದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಕೇಂದ್ರ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳ ಹಿನ್ನೆಲೆ ಚುನಾವಣೆಯಲ್ಲಿ ಜನತೆ ಬಿಜೆಪಿ ಪರ ಒಲವು ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೂಡ ಭಾರತೀಯ ಜನತಾ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಬಿಜೆಪಿ ಮುನ್ನಡೆಯುತ್ತಿದ್ದು, ಮುಂದಿನ ಚುನಾವಣೆಗಳಲ್ಲೂ ಕೂಡ ಪಾರುಪತ್ಯ ಸಾಧಿಸಲಿದೆ ಎಂದು ಹೇಳಿದರು. ವಿಜಯೋತ್ಸವದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಮಿನಾಸ್ ಪ್ರವೀಣ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಸದಸ್ಯೆ ಲಕ್ಷ್ಮಿ, ನಗರ ಬಿಜೆಪಿ ಪದಾಧಿಕಾರಿಗಳಾದ ಉಮೇಶ್ ಸುಬ್ರಮಣಿ, ಬಿ.ಕೆ. ಅರುಣ್ ಕುಮಾರ್, ಮನು ಮಂಜುನಾಥ್, ಸುಕುಮಾರ್, ಟೌನ್ ಬ್ಯಾಂಕ್ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಸತೀಶ್, ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೆರ ಮನೋಹರ್ ಮಾದಪ್ಪ ಹಾಗೂ ಪದಾಧಿಕಾರಿಗಳು, ಮತ್ತಿತರರು ಇದ್ದರು.

ವೀರಾಜಪೇಟೆ : ಉತ್ತರ ಪ್ರದೇಶ. ಉತ್ತರಾಖಂಡ್‍ನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕ ಸ್ಥಾನಗಳನ್ನು ಗಳಿಸಿದ ಹಿನ್ನೆಲೆಯಲ್ಲಿ ವೀರಾಜಪೇಟೆಯ ನಗರ ಬಿಜೆಪಿ ವತಿಯಿಂದ ಇಂದು ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ರಾಜ್ಯ ಹೆದ್ದಾರಿಯ ಗಡಿಯಾರ ಕಂಬದ ಬಳಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ರಘುನಾಣಯ್ಯ, ಪಕ್ಷದ ನಗರ ಸಮಿತಿ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ, ದಿವಾಕರ ಶೆಟ್ಟಿ, ಕಾರ್ಯದರ್ಶಿ ಯೋಗೀಶ್ ನಾಯ್ಡು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್, ಮಾಜಿ ಅಧ್ಯಕ್ಷೆ ಮನೆಯಪಂಡ ದೇಚಮ್ಮ, ಟಿ.ಪಿ. ಕೃಷ್ಣ. ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಜೋಕಿಂ, ಮನುದೇವಯ್ಯ, ಇ.ಸಿ.ಜೀವನ್, ಎಂ. ಮಧು ದೇವಯ್ಯ , ಟಿ.ಜೆ.ಶಂಕರ್ ಶೆಟ್ಟಿ. ಮತ್ತಿತರರು ಭಾಗವಹಿಸಿದ್ದರು.

ಐತಿಹಾಸಿಕ ಗೆಲವು : ರೀನಾ ಪ್ರಕಾಶ್

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ದೇಶದ ದೊಡ್ಡರಾಜ್ಯ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ನಿಚ್ಛಲ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದಿರುವದು ಐತಿಹಾಸಿಕ ಗೆಲವು ಎಂದು ಬಿಜೆಪಿ ರಾಜ್ಯಕಾರಿಣಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ತಿಳಿಸಿದ್ದಾರೆ.

ನೋಟು ನಿಷೇಧದಿಂದ ದೇಶದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿರುವದರಿಂದ ಜನತೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ. ಇಂದು ಮುಂದಿನ ಕರ್ನಾಟಕ ರಾಜ್ಯ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದ್ದಾರೆ.

ಸೋಮವಾರಪೇಟೆ : ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದೇ ಒಂದು ಭ್ರಷ್ಟಾಚಾರ ನಡೆಸದೇ ಪಾರದರ್ಶಕ ಆಡಳಿತ ನಡೆಸುತ್ತಿದ್ದು, ಅಭಿವೃದ್ಧಿಯನ್ನೇ ಮೂಲಮಂತ್ರ ವನ್ನಾಗಿಸಿಕೊಂಡ ಹಿನ್ನೆಲೆ ಮೋದಿ ಆಡಳಿತಕ್ಕೆ ಮತದಾರರು ಮೆಚ್ಚುಗೆ ಸೂಚಿಸಿದ್ದಾರೆ ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.

ಪಂಚರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್‍ನಲ್ಲಿನ ಅಭೂತಪೂರ್ವ ಗೆಲುವಿನ ಹಿನ್ನೆಲೆ ಸೋಮವಾರಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಆಯೋಜಿಸಿದ್ದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಚ್ಛ ಹಾಗೂ ಅಭಿವೃದ್ಧಿ ಪಥದ ಆಡಳಿತದಿಂದಾಗಿ ಮೋದಿ ಅವರು ಜನಮಾನಸದಲ್ಲಿ ಉಳಿದಿದ್ದಾರೆ. ದೇಶದ ಜನರು ಬಿಜೆಪಿ ಜತೆಗಿರುವದು ಈ ಚುನಾವಣೆಯಿಂದ ಸ್ಪಷ್ಟವಾಗುತ್ತದೆ. ಮುಂದಿನ ವರ್ಷ ಕರ್ನಾಟಕದಲ್ಲೂ ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿ ಅತೀ ಹೆಚ್ಚು ಸ್ಥಾನಗಳಿಸಿ ಅಧಿಕಾರ ಹಿಡಿಯಲಿದೆ. ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದರು.

ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಭಾರತೀಯ ಜನತಾ ಪಾರ್ಟಿಯನ್ನು ಮಣಿಸಲು ಕಾಂಗ್ರೆಸ್ ಹಾಗೂ ಎಸ್‍ಪಿ, ಬಿಎಸ್‍ಪಿ ಉತ್ತರಪ್ರದೇಶದಲ್ಲಿ ಇನ್ನಿಲ್ಲದ ಕಸರತ್ತು ನಡೆಸಿದ್ದವು. ಮತದಾರರು ಅಭಿವೃದ್ಧಿಪರ ಆಡಳಿತಕ್ಕೆ ಮತ ನೀಡಿದ್ದು, ಇದು ಮುಂದಿನ ಕರ್ನಾಟದ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.

ವಿಜಯೋತ್ಸವದಲ್ಲಿ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯೆ ತಂಗಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್,ಭಾರತೀಯ ಜನತಾ ಪಾರ್ಟಿಯ ಮುಖಂಡರು ಗಳಾದ ಮನುಕುಮಾರ್ ರೈ, ಶುಂಠಿ ಸುರೇಶ್, ಟಿ.ಕೆ. ರಮೇಶ್, ಹರಗ ಉದಯ, ಕಿಬ್ಬೆಟ್ಟ ಮಧು, ಮಹೇಶ್ ತಿಮ್ಮಯ್ಯ, ಜೆ.ಸಿ. ಶೇಖರ್, ಎಸ್.ಆರ್. ಸೋಮೇಶ್, ಬಿ. ಶಿವಪ್ಪ, ನಳಿನಿ ಗಣೇಶ್, ಲೀಲಾ ನಿರ್ವಾಣಿ, ಉಷಾ ತೇಜಸ್ವಿ, ಸುಶೀಲ, ಜಲಜಾ ಶೇಖರ್, ಶ್ರೀಕಾಂತ್, ಶರತ್‍ಚಂದ್ರ, ಮೋಹನ್‍ದಾಸ್, ಪಿ.ಮಧು ಸೇರಿದಂತೆ ಇತರರು ಭಾಗವಹಿಸಿದ್ದರು.

ಕುಶಾಲನಗರ : ಉತ್ತರ ಭಾರತದ ಚುನಾವಣಾ ಫಲಿತಾಂಶ ರಾಜ್ಯ ರಾಜಕೀಯದ ಬದಲಾವಣೆಯ ಮುನ್ಸೂಚನೆ ನೀಡಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಬಿ.ಬಿ.ಭಾರತೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತರಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಉಳಿದಂತೆ ಎರಡು ರಾಜ್ಯಗಳಲ್ಲಿ ಸರಕಾರ ರಚಿಸುವ ಹಂತದವರೆಗೆ ಪಕ್ಷ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಷ್ಟ್ರಾದ್ಯಂತ ಸಂಚಲನ ಉಂಟು ಮಾಡಿದ್ದಾರೆ. ನೋಟ್ ಬ್ಯಾನ್ ಸೇರಿದಂತೆ ಇತರೆ ವಿಷಯಗಳಲ್ಲಿ ಬಿಜೆಪಿಯನ್ನು ಮೂದಲಿಸುತ್ತಿದ್ದ ಪಕ್ಷದ ಪ್ರಮುಖರಿಗೆ ಈ ಚುನಾವಣೆ ತಕ್ಕ ಪಾಠ ಕಲಿಸಿದೆ. ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತವನ್ನು ಕಿತ್ತೊಗೆಯುವ ಮೂಲಕ ಎಲ್ಲೆಡೆ ಅಧಿಕಾರ ಬಿಜೆಪಿಮ ಯವಾಗಲಿದೆ ಎಂದರು.

ಪ್ರಮುಖರಾದ ಜಿ.ಎಲ್.ನಾಗರಾಜ್ ಮಾತನಾಡಿ, ‘ಸಬ್‍ಕೆ ಸಾಥ್ ಸಬ್‍ಕೆ ವಿಕಾಸ್' ಧ್ಯೇಯವಾಕ್ಯದಡಿ ಪಕ್ಷ ಕಾರ್ಯನಿರ್ವಹಿಸುತ್ತಿರುವ ಕಾರಣ ಅಭೂತಪೂರ್ವ ಜಯ ದೊರಕಿದೆ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನೆರೆದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಪಕ್ಷದ ವಿರುದ್ಧ ಜಯಘೋಷ ಕೂಗಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

ಈ ಸಂದರ್ಭ ನಗರಾಧ್ಯಕ್ಷ ಕೆ.ಜಿ.ಮನು, ತಾಲೂಕು ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್. ಶಿವಾನಂದ್, ಬಿಜೆಪಿ ಕಾರ್ಯದರ್ಶಿ ಶಿವಾಜಿರಾವ್, ಉಪಾಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಪಂಚಾಯಿತಿ ಸದಸ್ಯ ಹೆಚ್.ಎಂ. ಮಧುಸೂದನ್, ಯುವಮೋರ್ಚಾ ನಗರಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸದಸ್ಯ ಭಾಸ್ಕರ್ ನಾಯಕ್, ಹಿಂದುಳಿದ ವರ್ಗಗಳ ಘಟಕದ ದೇವರಾಜ್, ಪ್ರಮುಖರಾದ ವಿ.ಡಿ.ಪುಂಡರೀಕಾಕ್ಷ, ವಿ.ಆರ್. ಶಿವಶಂಕರ್, ಶಿವರಾಜ್, ಸರಳಾ ರಾಮಣ್ಣ, ಹೆಚ್.ಎನ್.ರಾಮಚಂದ್ರ, ಬಿ.ಜೆ.ಅಣ್ಣಯ್ಯ ಮತ್ತಿತರರು ಇದ್ದರು.