ಮಡಿಕೇರಿ, ಮಾ. 11: ಅರೆಭಾಷೆ ಗೌಡ ಜನಾಂಗದ ಅತ್ಯಂತ ಹಿರಿಯ ಸಂಸ್ಥೆ ಕೊಡಗು ಗೌಡ ವಿದ್ಯಾ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ತಾ. 26 ರಂದು ಪೂರ್ವಾಹ್ನ 7.30 ರಿಂದ ಅಪರಾಹ್ನ 1.30 ಗಂಟೆಯವರೆಗೆ ಚುನಾವಣೆ ಮತ್ತು 2 ಗಂಟೆಗೆ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ. ಒಟ್ಟು 4,388 ಸದಸ್ಯರನ್ನು ಹೊಂದಿರುವ ಸಂಘದ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕೋಶಾಧಿಕಾರಿ ಸೇರಿದಂತೆ ಏಳು ಮಂದಿ ನಿರ್ದೇಶಕರು ಹಾಗೂ ಮೂರು ಮಂದಿ ಮಹಿಳಾ ಮೀಸಲಾತಿ ನಿರ್ದೇಶಕಿಯರ ಆಯ್ಕೆ ನಡೆಯಬೇಕಾಗಿದೆ.

ಈ ಬಾರಿ ವಿಶೇಷವಾಗಿ ಸದಸ್ಯರಿಗೆ ಸಂಘದ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು, ಸಂಘದ ಕಚೇರಿಯಿಂದ ಪಡೆದುಕೊಳ್ಳಬಹು ದಾಗಿದೆ. ಗುರುತಿನ ಚೀಟಿ ಪಡೆಯಲಾಗದವರು ಐಡಿ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ಅಧಿಕೃತ ದಾಖಲೆಗಳಲ್ಲಿ ಯಾವದಾದರು ಒಂದು ದಾಖಲೆಯನ್ನು ಹಾಜರುಪಡಿಸಿ ಹಕ್ಕು ಚಲಾಯಿಸಬಹುದಾಗಿದೆ ಎಂದು ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.

ಕೊಡಗು ಗೌಡ ಸಮಾಜದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ನಿವೃತ್ತ ತಹಶೀಲ್ದಾರ್ ಕಾಳೇರಮ್ಮನ ರಾಘವಯ್ಯ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಘದ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08272-225970 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಈರಪ್ಪ ತಿಳಿಸಿದ್ದಾರೆ.