ಮಡಿಕೇರಿ, ಮಾ. 10: ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಕೆಗೆ ನಗರಸಭಾ ಸ್ಥಾಯಿ ಸಮಿತಿ ನಿರ್ಣಯ ಕೈಗೊಂಡಿದ್ದು, ಪ್ರಾಯೋಗಿಕವಾಗಿ ನಗರಸಭಾ ಆಯುಕ್ತರು ಹಾಗೂ ಸದಸ್ಯರ ಮನೆಗಳಿಗೆ ಅಳವಡಿಸುವದಕ್ಕೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.ನಗರಸಭಾ ಸಭಾಂಗಣದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ನಗರದ ಜನತೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ದಿನಂಪ್ರತಿ ಸಿಗುವಂತಹ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಆದರೆ ಕನ್ನಂಡಬಾಣೆ ವ್ಯಾಪ್ತಿಯಲ್ಲಿ ಕುಡಿಯುವ ನೀರನ ಸಮಸ್ಯೆ ಎದುರಾಗಿದೆ. ಕೊಳಕು ಮಿಶ್ರಿತ ನೀರು ಸರಬರಾಜು ಆಗುತ್ತಿದೆ. ಕುಂಡಾಮೇಸ್ತ್ರಿ ಯೋಜನೆಯ ನೀರು ಬಳಕೆ ಮಾಡಲು ಅವಕಾಶ ಮಾಡಿಕೊಡುವಂತೆ ನಗರ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಸಭೆಯ ಗಮನ ಸೆಳೆದರು.
ಕನ್ನಂಡಬಾಣೆ ವ್ಯಾಪ್ತಿಯಲ್ಲಿ ಜಲಮೂಲ ಹೊಂದಿರುವ ಕೆರೆ ಹಾಗೂ ಗದ್ದೆಗಳಿಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಕೆರೆಯ ಜಾಗವನ್ನೇ ಅಧಿಕಾರಿಗಳು ನಾಪತ್ತೆ ಮಾಡಿದ್ದಾರೆ ಎಂದು ರಮೇಶ್ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿ ಸದಸ್ಯ ಕೆ.ಜೆ. ಪೀಟರ್ ಸಂಬಂಧಿಸಿದ ದಾಖಲೆಯನ್ನು ಶಾಸಕರಿಗೆ ನೀಡಿದರು.
ನಗರದಲ್ಲಿ ಜಲಮೂಲ ಕೆರೆಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ಕನ್ನಂಡಬಾಣೆ ಜಲಮೂಲ ಮುಚ್ಚಿಸುವದು
(ಮೊದಲ ಪುಟದಿಂದ) ಹಾಗೂ ಕೆರೆ ಒತ್ತುವರಿಯನ್ನು ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದು ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹಾಗೂ ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ ಆಗ್ರಹಿಸಿದರು.
ನಗರ ವ್ಯಾಪ್ತಿಯ ಕೆಲವೆಡೆ ಮನೆಗಳಿಗೆ ಅಳವಡಿಸಿದ ನಲ್ಲಿಗಳಲ್ಲಿ ನೀರು ಪೋಲಾಗುತ್ತಿರುತ್ತದೆ. ನೀರಿನ ಉಳಿತಾಯ ಅಗತ್ಯ. ಈ ಹಿನ್ನೆಲೆಯಲ್ಲಿ ನೀರು ಪೋಲಾಗದಂತೆ ಮೀಟರ್ ಅಳವಡಿಸುವದಕ್ಕೆ ಕ್ರಮಕೈಗೊಳ್ಳುವಂತೆ ಕೆ.ಎಸ್. ರಮೇಶ್ ಹೇಳಿದರು.
ಅಪ್ಪಚ್ಚು ರಂಜನ್ ಮಾತನಾಡಿ, ಪ್ರಾಯೋಗಿಕವಾಗಿ ನಗರಸಭಾ ಆಯುಕ್ತರ ಕಚೇರಿ, ಮನೆ ಹಾಗೂ ಸದಸ್ಯರ ಮನೆಗಳಿಗೆ ಅಳವಡಿಸುವ ಸಲಹೆ ನೀಡಿದರು. ಈ ಬಗ್ಗೆ ಸಭೆಯಲ್ಲಿ ಒಕ್ಕೊರಲ ನಿರ್ಣಯವನ್ನು ಕೈಗೊಳ್ಳಲಾಯಿತು.
ಕುಡಿಯುವ ನೀರಿನ ಅವಶ್ಯಕತೆಗೆ ಸಂಬಂಧಿಸಿದಂತೆ ನಗರಸಭಾ ವ್ಯಾಪ್ತಿಯಲ್ಲಿ ಸರ್ವೇ ಮಾಡಿದಾಗ ಸಮಸ್ಯೆ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯಕ್ಕೆ ರೂ. 9 ಲಕ್ಷ ಅನುದಾನ ಮೀಸಲಿಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಕುಡಿಯುವ ನೀರಿನ ಯೋಜನೆಯಲ್ಲಿ ಅನುದಾನ ಕಲ್ಪಿಸುವದಾಗಿ ಆಯುಕ್ತೆ ಶುಭಾ ತಿಳಿಸಿದರು.
ನಗರದಲ್ಲಿ ನೀರು ಪೋಲಾಗದಂತೆ ನಗರದ ಜನತೆ ಎಚ್ಚರ ವಹಿಸಬೇಕು. ನೀರಿನ ಸಮಸ್ಯೆ ತಲೆದೋರಿದಲ್ಲಿ ನಗರಸಭೆ ಕಚೇರಿ ಅಥವಾ ತನ್ನನ್ನು ದೂರವಾಣಿಯಲ್ಲಿ ಸಂಪರ್ಕಿಸಿದಲ್ಲಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುವದಾಗಿ ಶಾಸಕ ಅಪ್ಪಚ್ಚು ರಂಜನ್ ಮಾದ್ಯಮದೊಂದಿಗೆ ಮನವಿ ಮಾಡಿದರು.
ಕುಡಿಯುವ ನೀರಿಗೆ ಕೂಟುಹೊಳೆಯಲ್ಲಿ ಸಾಕಷ್ಟು ನೀರು ಇದೆ. ವಿತರಣೆಯಲ್ಲಿ ಸಮಸ್ಯೆಯಾಗಿದೆ, ಇತ್ತ ಗಮನ ಹರಿಸಲಾಗುವದೆಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸ್ಥಾಯಿ ಸಮಿತಿ ಸದಸ್ಯರು, ಇತರ ಅಧಿಕಾರಿಗಳು ಇದ್ದರು.