ನಾಪೋಕ್ಲು, ಮಾ. 11: ಪರ ಧರ್ಮ ಸಹಿಷ್ಣುತೆ ಹಿಂದೂ ಧರ್ಮದ ಮೂಲ ತತ್ವ, ಪರರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಸುವ ಮತ್ತು ಸತ್ಯವನ್ನು ಮಾತ್ರ ಹೇಳುವ ಗುಣವನ್ನೂ ಹೊಂದುವ ಮೂಲಕ ಸಮಾಜಕ್ಕೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಡಬೇಕು. ಸುಂದರ ಸಮಾಜವನ್ನು ರೂಪಿಸುವ ಹಿರಿಯರ ಕನಸು ನನಸಾಗಲು ದೇವಾಲಯಗಳ ಬ್ರಹ್ಮಕಲಶೋತ್ಸವದ ಜೊತೆಯಲ್ಲಿ ನಮ್ಮ ಆತ್ಮದ ಬ್ರಹ್ಮಕಲಶವೂ ಆಗಬೇಕು ಎಂದು ಅರಣ್ಯ ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆಶಯ ವ್ಯಕ್ತಪಡಿಸಿದರು.ಇತಿಹಾಸ ಪ್ರಸಿದ್ಧ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವಸ್ಥಾನದ ಒಳಾಂಗಣ ಹಾಸುಗಲ್ಲು ಹೊದಿಕೆಯನ್ನು ಉದ್ಘಾಟಿಸಿ, ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ‘ವಸುದೈವ ಕುಟುಂಬಕಂ’, ಸರ್ವೇ ಜನ ಸುಖಿನೋಭವಂತು’ ಎಂಬ ಮಾತುಗಳು ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗ ಬಾರದು. ಅದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

(ಮೊದಲ ಪುಟದಿಂದ) ನಮ್ಮ ಮನಸ್ಸು ಶುದ್ಧವಾದರೆ ಎಲ್ಲವೂ ಒಳಿತಾಗುತ್ತದೆ. ಸನಾತನ ಹಿಂದೂ ಧರ್ಮ ವಿಶಾಲ ತಳಹದಿಯಲ್ಲಿ ಎಲ್ಲರನ್ನೂ ಪ್ರೀತಿಸಲು ಕಲಿಸಿದೆ ಎಂದು ಸಚಿವರು ನುಡಿದರು.

ಅನ್ನದಾನ ಶ್ರೇಷ್ಠ ದಾನ: ಧಾರ್ಮಿಕ ಉಪನ್ಯಾಸ ನೀಡಿದ ವೈದಿಕ ವಿದ್ವಾಂಸ ಹಿರಣ್ಯ ವೆಂಕಟೇಶ ಭಟ್ ಅನ್ನದಾನ ಎಲ್ಲಾ ದಾನಗಳಲ್ಲಿಯೂ ಅತ್ಯಂತ ಶ್ರೇಷ್ಠವಾದ ಮತ್ತು ಅದ್ಭುತ ದಾನ ಎಂದು ಹೇಳಿದರು. ತೃಪ್ತಿಯಿಂದ ಸ್ವೀಕರಿಸುವ ಅನ್ನದಾನವನ್ನು ಮಾಡುವ ದೇವಾಲಯಗಳು ಐಶ್ವರ್ಯದಿಂದ ಬೆಳಗುತ್ತದೆ ಎಂದು ಹೇಳಿದರು.

ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಅಬುದಾಬಿ ಯು.ಎ.ಇ ಎಕ್ಸೇಂಜ್‍ನ ಗ್ಲೋಬಲ್ ಹೆಡ್ ಸುಧೀರ್‍ಕುಮಾರ್ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರಸ್ವತಿ ಕಾಮತ್, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕೊಡೆಂಕಿರಿ ಅತಿಥಿಗಳಾಗಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯಾಧ್ಯಕ್ಷ ಸೋಮಶೇಖರ ಕೊೈಂಗಾಜೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಯು.ಎಂ. ಕಿಶೋರ್‍ಕುಮಾರ್, ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಬಿ. ದಿವಾಕರ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಅಚ್ಚುತ ಅಟ್ಲೂರು ಮತ್ತು ಪುರುಷೋತ್ತಮ ಕಿರ್ಲಾಯ ನಿರೂಪಿಸಿದರು.

- ದುಗ್ಗಳ ಸದಾನಂದ