ಮಡಿಕೇರಿ, ಮಾ. 10: ಕರ್ನಾಟಕದ ಇತರ ಜಿಲ್ಲೆಗಳಿಗಿಂತ ಕೊಡಗು ಪೊಲೀಸ್ ವ್ಯವಸ್ಥೆ ಉತ್ತಮವಿದ್ದು, ಪೊಲೀಸರ ಸೇವೆಯಲ್ಲಿ ಜನತೆಯ ಸಹಕಾರ ಇರಬೇಕೆಂದು ಕರ್ನಾಟಕ ಪೊಲೀಸ್ ನಾಗರಿಕ ಸೇವಾ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಎಡಿಜಿಪಿ ಸುನಿಲ್ ಅಗರ್‍ವಾಲ್ ಕರೆ ನೀಡಿದ್ದಾರೆ. ಪೊಲೀಸ್ ಇಲಾಖೆಯ ಕೊಡಗು ಉಸ್ತುವಾರಿ ಪರಿವೀಕ್ಷಕರೂ ಆಗಿರುವ ಸುನಿಲ್ ಅಗರ್‍ವಾಲ್ ಅವರು, ಇಂದು ಜಿಲ್ಲೆಯ ಪೊಲೀಸರ ಮುಂಬಡ್ತಿ ಪದೋನ್ನತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಜಿಲ್ಲಾ ಕೇಂದ್ರದ ಪೊಲೀಸ್ ಮೈದಾನದಲ್ಲಿ ಒಟ್ಟು 194 ಮಂದಿಗೆ ಪದೋನ್ನತಿ ಸಮಾರಂಭದಲ್ಲಿ ಸಾಂಕೇತಿಕವಾಗಿ ಹೊಣೆಗಾರಿಕೆಗಳನ್ನು ಹಂಚಿ, ಬಡ್ತಿ ಪಡೆದವರನ್ನು ಅಭಿನಂದಿಸಿದರು.

ನೋಯಿಸಬೇಡಿ: ಪೊಲೀಸ್ ಇಲಾಖೆಯಲ್ಲಿ ಓರ್ವ ಪೇದೆಯಿಂದ ಪೊಲೀಸ್ ಮಹಾನಿರ್ದೇಶಕರವರೆಗೆ ಸಮಾನತೆಯ ಸಂಕೇತವಾಗಿ ಖಾಕಿ ಸಮವಸ್ತ್ರ ಧರಿಸುವ ನಾವು, ಅನೇಕ ಕಾರಣಗಳಿಂದ ನೊಂದು ಬರುವ ಸಾರ್ವಜನಿಕರನ್ನು ಠಾಣೆಗಳಲ್ಲಿ ಇನ್ನಷ್ಟು ನೋಯಿಸಬೇಡಿ ಎಂದು ಎಡಿಜಿಪಿ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

ಸಾರ್ವಜನಿಕ ವಲಯದಲ್ಲಿ ಶೇ. 60ರಷ್ಟಾದರೂ

(ಮೊದಲ ಪುಟದಿಂದ) ಪ್ರಶಂಸೆಗಳಿಸಿ, ಕನಿಷ್ಟ ಟೀಕೆಗಳನ್ನು ಸವಾಲಾಗಿ ಸ್ವೀಕರಿಸುವಂತೆ ವ್ಯಾಖ್ಯಾನಿಸಿದ ಅವರು, ಕಾನೂನಿಗಿಂತ ದೊಡ್ಡವರು ಎಂಬಂತೆ ಪೊಲೀಸ್ ವ್ಯವಸ್ಥೆಯಲ್ಲಿ ದರ್ಪ ತೋರಬೇಡಿ ಎಂಬದಾಗಿ ಬುದ್ಧಿಮಾತು ಹೇಳಿದರು.

ನೂತನ ಬದಲಾವಣೆ: ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು, ಕೇಂದ್ರ ಹಾಗೂ ರಾಜ್ಯ ಸಚಿವಾಲಯ ನಿರ್ದೇಶನದಂತೆ, ಪ್ರಸಕ್ತ ವರ್ಷದಿಂದ ಇಲಾಖೆಯಲ್ಲಿ ಮುಂಬಡ್ತಿ ಹೊಂದುವವರಿಗೆ ಪದೋನ್ನತಿ ಸಮಾರಂಭ ಏರ್ಪಡಿಸಿ ಅಂತವರ ಸೇವೆಯನ್ನು ಗುರುತಿಸಲಾಗುತ್ತಿದೆ ಎಂದು ನುಡಿದರು. ಇದೊಂದು ಆನಂದದಾಯಕವಾದ ನೂತನ ಬದಲಾವಣೆ ಎಂದು ಹರ್ಷ ವ್ಯಕ್ತಪಡಿಸಿದರು. ಅರೆಸೇನಾ ಪಡೆಯಂತೆ ಪೊಲೀಸ್ ಇಲಾಖೆಯಲ್ಲಿ ಈ ಬದಲಾವಣೆ ತರಲಾಗಿದ್ದು, ಪೊಲೀಸರಿಗೆ ಇದು ಹೆಮ್ಮೆ ಎಂದು ಮಾರ್ನುಡಿದರು.

194 ಮಂದಿಗೆ ಮುಂಬಡ್ತಿ: ಕೊಡಗು ಜಿಲ್ಲೆಯಲ್ಲಿರುವ 19 ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಾ ಹಿರಿತನದೊಂದಿಗೆ ಉತ್ತಮ ಹೆಸರು ಗಳಿಸಿರುವ 39 ಮುಖ್ಯ ಪೇದೆಗಳನ್ನು ಸಹಾಯಕ ಸಬ್‍ಇನ್ಸ್‍ಪೆಕ್ಟರ್‍ಗಳಾಗಿ ಪದೋನ್ನತಿಗೊಳಿಸಿ ಭುಜಪಟ್ಟಿ ‘ಸ್ಟಾರ್'ಗಳನ್ನು ನೀಡಲಾಯಿತು.

ಅಂತೆಯೇ 82 ಪೊಲೀಸ್ ಸಿಬ್ಬಂದಿಗಳಿಗೆ ಮುಂಬಡ್ತಿಯೊಂದಿಗೆ ಮುಖ್ಯಪೇದೆಗಳಾಗಿ ಪದೋನ್ನತಿಯ ‘ಭುಜಪಟ್ಟಿ' ವಿತರಿಸಲಾಯಿತು.

ಸಶಸ್ತ್ರಪಡೆ : ಪೊಲೀಸ್ ಸಶಸ್ತ್ರಪಡೆಯ 36 ಮುಖ್ಯಪೇದೆಗಳಿಗೆ ಸಹಾಯಕ ಮೀಸಲು ಸಬ್‍ಇನ್ಸ್‍ಪೆಕ್ಟರ್‍ಗಳಾಗಿ ಪದೋನ್ನತಿಯೊಂದಿಗೆ, ಸಶಸ್ತ್ರ ಪೊಲೀಸ್ ವಿಭಾಗದ 37 ಸಿಬ್ಬಂದಿಗಳಿಗೆ ಬಡ್ತಿ ಮೂಲಕ ಮುಖ್ಯ ಪೇದೆಗಳಾಗಿ ನಿಯೋಜಿಸಲಾಯಿತು. ಉಭಯ ವ್ಯವಸ್ಥೆಯ ಒಟ್ಟು 194 ಮಂದಿ ಇಂದು ಮುಂಬಡ್ತಿಯೊಂದಿಗೆ ಅಭಿನಂದನೆ ಸ್ವೀಕರಿಸಿದರು. ಈ ವೇಳೆ ಪೊಲೀಸ್ ವಾದ್ಯಸಹಿತ ಆಕರ್ಷಕ ಪಥ ಸಂಚಲನ ಏರ್ಪಡಿಸಲಾಗಿತ್ತು. ಇನ್ಸ್‍ಪೆಕ್ಟರ್ ಕರೀಂ ರಾವುತರ್ ಕಾರ್ಯಕ್ರಮ ನಿರೂಪಿಸಿದರು. ವೀರಾಜಪೇಟೆ ಉಪವಿಭಾಗದ ಉಪ ಅಧೀಕ್ಷಕ ನಾಗಪ್ಪ ವಂದಿಸಿದರು.