ಶನಿವಾರಸಂತೆ, ಮಾ. 11: ಇಲ್ಲಿನ ಸಂತೆ ದಿನ ಮಹಿಳೆಯೊಬ್ಬರಿಗೆ ಮಂಕು ಬೂದಿ ಎರಚಿ ಆಕೆಗೆ 2 ನಕಲಿ ಚಿನ್ನದ ಕಾಸಿನ ಸರಗಳನ್ನು ತೋರಿಸಿ, ಆಕೆಯ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಕರಿಮಣಿ ಸರ ಪಡೆದು ಅಪರಿಚಿತ ಮಹಿಳೆ ಹಾಗೂ ಪುರುಷ ಗೃಹಿಣಿಗೆ ವಂಚಿಸಿ ಪರಾರಿಯಾದ ಘಟನೆ ಇಂದು ಸಂತೆ ಮರುಕಟ್ಟೆಯ ಬಳಿ ನಡೆಯಿತು.

ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ನಿವಾಸಿ ಲೀಲಾವತಿ ತನ್ನ ಗಂಡ ನಿಧನರಾದ ಮೇಲೆ ತನ್ನ ಮೂವರು ಪುತ್ರಿಯರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೂಗೂರಿಗೆ ಬಂದಿದ್ದ ಇವರು ಇಂದು ಮಧ್ಯಾಹ್ನ ಸಂತೆ ಮಾರುಕಟ್ಟೆಯ ಬಳಿ ಹೋದಾಗ ಅಪರಿಚಿತ ಮಹಿಳೆ ಹಾಗೂ ಪುರುಷರಿಬ್ಬರು ಲೀಲಾವತಿಯನ್ನು ಪಕ್ಕಕ್ಕೆ ಕರೆದು ಮಂಕು ಬೂದಿ ಎರಚಿ ತಮ್ಮಲ್ಲಿದ್ದ ಎರಡು ನಕಲಿ ಚಿನ್ನದ ಕಾಸಿನ ಸರ ತೋರಿಸಿ ಆಕೆಯ ಕೈಗೆ ನೀಡಿದರು. ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಅದರಲ್ಲಿದ್ದ ತಾಳಿಯನ್ನು ಬಿಚ್ಚಿ ಗೃಹಿಣಿಗೆ ಕೊಟ್ಟು ಸಂತೆಯೊಳಗಡೆ ನುಗ್ಗಿ ಮಾಯವಾದರು ಎನ್ನಲಾಗಿದೆ.

ನಕಲಿ ಚಿನ್ನದ ಕಾಸಿನ ಸರವನ್ನು ಚಿನ್ನದ ಅಂಗಡಿಗೆ ಹೋಗಿ ಪರಿಶೀಲಿಸಿದಾಗ ತಾನು ಮೋಸ ಹೋದ ಬಗ್ಗೆ ಅರಿವಾಗಿ ಲೀಲಾವತಿ ಕೂಗಾಡುತ್ತಿದ್ದರು. ಈಕೆಯ ಗೋಳಾಟ ನೋಡಿದ ದಾರಿ ಹೋಕರು ಈಕೆಯನ್ನು ಶನಿವಾರಸಂತೆ ಪೊಲೀಸ್ ಠಾಣೆಗೆ ಕಳುಹಿಸಿದರು. ಪೊಲೀಸರು ಸಮಾಧಾನಪಡಿಸಿ ತಕ್ಷಣ ಠಾಣಾಧಿಕಾರಿ ಎಂ.ಹೆಚ್. ಮರಿಸ್ವಾಮಿ ಈಕೆಯನ್ನು ಕರೆದುಕೊಂಡು ಪೊಲೀಸ್ ರೊಂದಿಗೆ ಸಂತೆ ಮಾರುಕಟ್ಟೆ ಹಾಗೂ ಬಸ್ ನಿಲುಗಡೆ ಸ್ಥಳಗಳಲ್ಲಿ ಅಪರಿಚಿತರಿಗಾಗಿ ಜಾಲಾಡಿದರೂ ಪ್ರಯೋಜನವಾಗಲಿಲ್ಲ.

ಲೀಲಾವತಿ ಪೊಲೀಸರಿಗೆ ದೂರು ನೀಡಿ ಮನೆಯತ್ತ ತೆರಳಿದರು. ಈ ಹಿಂದೆಯೂ ಸಂತೆ ದಿವಸ ಅಪರಿಚಿತರು ಮಹಿಳೆಯರಿಗೆ ವಂಚಿಸಿ, ಆಭರಣಗಳನ್ನು ಅಪಹರಿಸಿದ ಘಟನೆಗಳು ಇಲ್ಲಿ ನಡೆದಿದೆ. ಚಿನ್ನ ಅಪಹರಿಸುವ ಜಾಲವೇ ಇದೆ ಎನ್ನಲಾಗಿದೆ. ಮಹಿಳೆಯರು ಸಂತೆಯ ದಿವಸ ಆಭರಣಗಳನ್ನು ಧರಿಸಿಕೊಂಡು ಪ್ರದರ್ಶನ ಮಾಡುವವರಿಗೆ ಎಚ್ಚರಿಕೆ. ನಿಮ್ಮೂರಿಗೂ ಬಂದಾರು ಜೋಕೆ.