ಮಡಿಕೇರಿ, ಮಾ. 10: ಇತರ ಸ್ಥಳಗಳಿಗಿಂತ ಭೌಗೋಳಿಕವಾಗಿ ಭಿನ್ನವಾಗಿರುವ, ಬೆಟ್ಟ ಗುಡ್ಡಗಳೇ ಪ್ರದಾನವಾಗಿರುವ ಕೊಡಗು ಕೃಷಿಯಿಂದಾಗಿ ಪ್ರಸಿದ್ಧಿ ಪಡೆದಿದೆ. ಕಾಫಿ, ಏಲಕ್ಕಿ, ಕಿತ್ತಳೆ, ಕರಿಮೆಣಸು ಮುಂತಾದ ವುಗಳಿಂದ ಕೊಡಗು ಕೃಷಿ ಪ್ರದಾನವಾದ ಜಿಲ್ಲೆ ಎನಿಸಿದೆ. ಅದರಲ್ಲೂ ಸಂಬಾರ ಬೆಳೆಗಳ ರಾಣಿ ಎನಿಸಿದ ಏಲಕ್ಕಿಯನ್ನು ಹೆಚ್ಚಾಗಿ ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಬಹಳ ಹಿಂದಿನಿಂದಲೂ ಭಾರತದಿಂದ ರಫ್ತಾಗುತ್ತಿರುವ ಏಲಕ್ಕಿಗೆ ಅರಬ್ ದೇಶದಲ್ಲಿ ಬಹಳ ಬೇಡಿಕೆ ಇದೆ. ಅಂತೆಯೇ ಏಲಕ್ಕಿ ಕೊಡಗಿನ ರೈತ ಸಮುದಾಯಕ್ಕೆ ಆರ್ಥಿಕ ಸಮೃದ್ಧತೆಯನ್ನು ನೀಡಿದ ಬೆಳೆ. 1980ರ ದಶಕದ ಆರಂಭದವರೆಗೆ ಏಲಕ್ಕಿ ಬೆಳೆಗಾರನೆಂದರೆ ಆತ ಶ್ರೀಮಂತಿಕೆಯ ಪ್ರತೀಕ ಎಂಬ ಮಾತಿತ್ತು. ಒಂದು ಕಾಲದಲ್ಲಿ ಕೊಡಗಿನಲ್ಲಿ ಏಲಕ್ಕಿ ಕೃಷಿ ಅತ್ಯಂತ ಉತ್ತುಂಗಕ್ಕೇರಿರುವದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಗ್ವಾಟೆಮಾಲ ಏಲಕ್ಕಿಗೆ ಸ್ಪರ್ಧೆಯೊಡ್ಡಿತ್ತು. ಆದರೆ ಇಂದು ಪ್ರಾಕೃತಿಕ ವೈಪರೀತ್ಯದಿಂದಾಗಿ ಹಂತ ಹಂತವಾಗಿ ಏಲಕ್ಕಿ ಬೆಳೆಗಳು ತನ್ನ ಅಸ್ತಿತ್ವ ಕಳೆದುಕೊಳ್ಳಲಾರಂಭಿಸಿದೆ.

ಮೊದಲೆಲ್ಲ ಕೊಡಗಿನ ಯಾವದೆ ಭಾಗಗಳಿಗೆ ಹೋದರೆ ಏಲಕ್ಕಿ ಪರಿಮಳ ಮೂಗಿಗೆ ಸೂಸುತ್ತಿತ್ತು. ಏಲಕ್ಕಿ ಮಾರಾಟ ಮಾಡಲು ತೆರಳುವ ರೈತರನ್ನು ಬಸ್ ನಿಲ್ದಾಣದಲ್ಲಿ ಕಾದು ತಮಗೆ ನೀಡಿ ಎಂದು ಮನವೊಲಿಸುವ ದಲ್ಲಾಳಿಗಳು ಕಂಡು ಬರುತ್ತಿದ್ದರು. ಇಂದು ಆ ರೀತಿಯ ಯಾವದೇ ದೃಶ್ಯಗಳು ಕಾಣಸಿಗುವದಿಲ್ಲ. ಇದಕ್ಕೆ ಕಾರಣ ಇಲ್ಲಿನ ಹೆಚ್ಚಿನ ಬೆಳೆಗಾರರು ಏಲಕ್ಕಿ ಬೆಳೆಯುವದನ್ನು ಬಿಟ್ಟಿದ್ದಾರೆ.

ಏಲಕ್ಕಿಗೆ ಕಟ್ಟೆರೋಗ ತೀವ್ರವಾಗಿ ಹರಡ ತೊಡಗಿತು. ಬೆಳೆಗಾರರು ಸಂಕಷ್ಟಕ್ಕೆ ಈಡಾದರು. ರಾಸಾಯನಿಕ ಸಿಂಪಡಣೆ ಯಿಂದ ರೋಗ ನಿಯಂತ್ರಿಸಲು ಸಾಧ್ಯ ವಾಗದೆ ಗಿಡವನ್ನೆಲ್ಲಾ ಕತ್ತರಿಸಿ ಹೊಸದಾಗಿ ಗಿಡಗಳನ್ನು ನೆಟ್ಟರು. ಪುನಃ ರೋಗ ಕಾಣಿಸತೊಡಗಿತ್ತು. ಇದೇ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆ ಬಂದಾಗ ಕಾಫಿ ಬೆಳೆ ಕೂಡ ಹೆಚ್ಚಳವಾಯಿತು. ಕಾಫಿಗೆ ಉತ್ತಮ ದರ ಲಭಿಸುವಾಗ ಇಲ್ಲಿನ ಬೆಳಗಾರರು ಏಲಕ್ಕಿಯನ್ನು ಕಡೆಗಣಿಸಿ ಕಾಫಿ ಕೃಷಿಗೆ ಮೊರೆಹೋದಾಗ ಕೊಡಗಿನಲ್ಲಿ ಏಲಕ್ಕಿ ಬೆಳೆ ಪ್ರಮಾಣವು ಕುಂಠಿತಗೊಂಡಿತ್ತು. ಏಲಕ್ಕಿಗೆ ಸೂಕ್ತ ದರ ದೊರಕದೆ ಇರುವದು, ವಾತಾವರಣದ ಏರುಪೇರು, ಕಟ್ಟೆರೋಗ, ಎಲೆಕಂದು ರೋಗ, ಕೀಟಗಳ ಹಾವಳಿ ಮುಂತಾದ ಸಮಸ್ಯೆಗಳಿಂದ ಇಲ್ಲಿನ ಬೆಳಗಾರರು ಬೇಸತ್ತು ಹೋಗಿದ್ದರು.

ಈ ಎಲ್ಲ ಕಾರಣಗಳಿಂದ ಏಲಕ್ಕಿ ಬೆಳೆಗೆ ಭವಿಷ್ಯವಿಲ್ಲವೆಂದರಿತ ಬೆಳೆಗಾರರು ಸಹಜವಾಗಿ ಕಾಫಿಗೆ ಆದ್ಯತೆ ನೀಡಿದರು. ಕ್ರಮೇಣ ಏಲಕ್ಕಿ ತೋಟಗಳೆಲ್ಲ ಕಾಫಿ ತೋಟಗಳಾಗಿ ಪರಿವರ್ತನೆಗೊಂಡಿತು. ದಿನಗಳು ಉರುಳಿದಂತೆ ಈ ಸುಗಂಧ ಭರಿತ ‘ಸಂಬಾರ ರಾಣಿ’ ಮರೆಯಾಗುತ್ತಿರುವದು ದುರಂತವೇ ಸರಿ.

- ಯಜಾಸ್ ದುದ್ದಿಯಂಡ, ಪತ್ರಿಕೋದ್ಯಮ ವಿದ್ಯಾರ್ಥಿ, ಕಾವೇರಿ ಕಾಲೇಜು, ವೀರಾಜಪೇಟೆ.