ಕುಶಾಲನಗರ, ಮಾ. 11: ಕುಶಾಲನಗರದಲ್ಲಿ ಮತ್ತೊಂದು ಧಾರ್ಮಿಕ ಕೇಂದ್ರದ ನೂತನ ಕಟ್ಟಡ ಸದ್ಯದಲ್ಲಿಯೇ ಲೋಕಾರ್ಪಣೆ ಗೊಳ್ಳಲಿದೆ. ಪಟ್ಟಣದ ಹೃದಯ ಭಾಗದ ಕೆಇಬಿ ಬಳಿಯ ಎತ್ತರದ ಬೆಟ್ಟದಲ್ಲಿ ಅತ್ಯಾಕರ್ಷಕ ವಿನೂತನ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಸಂತ ಸೆಬಾಸ್ಟಿಯನ್ನರ ದೇವಾಲಯದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ರೂಪುರೇಷೆ ನೀಡಲಾಗುತ್ತಿದೆ. ಅಂದಾಜು ರೂ. 3 ಕೋಟಿ ವೆಚ್ಚದಲ್ಲಿ ಅಂದಾಜು 1 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ. ಸುಮಾರು 100 ಅಡಿ ಎತ್ತರದ ಗೋಪುರ ನಿರ್ಮಾಣದೊಂದಿಗೆ ಈ ದೇವಾಲಯ 1000 ಕ್ಕೂ ಅಧಿಕ ಭಕ್ತಾದಿಗಳು ಏಕಕಾಲದಲ್ಲಿ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶ ಹೊಂದಿದೆ. ಹಳೆಯ ಪ್ರಾರ್ಥನಾ ಮಂದಿರದ ಸನಿಹದಲ್ಲಿ ಕಂಡುಬರುವ ಕ್ರೈಸ್ತ ಭಕ್ತಾದಿಗಳ ಸಾಮೂಹಿಕ ಪ್ರಾರ್ಥನಾ ಕೇಂದ್ರ ಸುತ್ತಲೂ ಪರಿಸರದ ನಡುವೆ ಎದ್ದು ನಿಂತಿದೆ.

2010 ರಲ್ಲಿ ಮೈಸೂರು ಪ್ರಾಂತ್ಯದ ಬಿಷಪ್ ರೆವೆರೆಂಡ್ ಫಾದರ್ ಥಾಮಸ್ ವಾಳಪಿಳ್ಳೈ ಅವರಿಂದ ಶಂಕುಸ್ಥಾಪನೆಗೊಂಡ ಈ ಧಾರ್ಮಿಕ ಕೇಂದ್ರದ ಸುತ್ತಲೂ ಪರಿಸರದ ಹೊದಿಕೆ ಹಾಸಿದಂತೆ ಗೋಚರಿಸುತ್ತಿದೆ. ಚರ್ಚ್ ಮುಂಭಾಗ ಆಕರ್ಷಕ ಉದ್ಯಾನವೊಂದನ್ನು ಕೂಡ ನಿರ್ಮಿಸಲಾಗಿದೆ.ನೂತನ ಚರ್ಚ್ ನಿರ್ಮಾಣಕ್ಕೆ ಅಂದಾಜು ರೂ. 3 ಕೋಟಿ ವೆಚ್ಚ ತಗಲುತ್ತಿದ್ದು, ದೇವಾಲಯದ 1200 ಭಕ್ತಾದಿಗಳು ಸುಮಾರು ರೂ. 1 ಕೋಟಿ ದೇಣಿಗೆ ನೀಡಿದ್ದು, ಇನ್ನೊಂದೆಡೆ ರಾಜ್ಯ ಸರಕಾರ ರೂ. 40 ಲಕ್ಷ ಅನುದಾನ ಕಲ್ಪಿಸಿದೆ. ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ನಿಧಿಯಿಂದ ರೂ. 4 ಲಕ್ಷ ಅನುದಾನ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರ ಮೂಲಕ ರೂ. 3 ಲಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ. ಜಾನ್ ರೂ. 4 ಲಕ್ಷ, ಹಿಂದಿನ ಲೋಕಸಭಾ ಸದಸ್ಯ ವಿಶ್ವನಾಥ್ ಅವರ ಮೂಲಕ ರೂ. 5 ಲಕ್ಷ ಅನುದಾನದ ಸಹಕಾರ ದೊರೆತಿದೆ ಎಂದು ನೂತನ ದೇವಾಲಯ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಕ್ರಿಜ್ವಲ್ ಕೋಟ್ಸ್ ಮಾಹಿತಿ ನೀಡಿದ್ದಾರೆ. ಇನ್ನುಳಿದಂತೆ ಸಮುದಾಯದ ಹಲವು ದಾನಿಗಳು ನೂತನ ದೇವಾಲಯ ನಿರ್ಮಾಣಕ್ಕೆ ಹಣ ನೀಡಿ ಕೈಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ನೂತನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷರು ಸೇರಿದಂತೆ ಸಮಿತಿಯ 14 ಜನರ ತಂಡ ಶ್ರಮಿಸಿ ಸ್ಥಳೀಯ ಭಕ್ತಾದಿಗಳ ಸಂಪೂರ್ಣ ಸಹಕಾರದೊಂದಿಗೆ ಹಾಗೂ ಜನಪ್ರತಿನಿಧಿಗಳು, ಸರಕಾರದ ಸಹಾಯ ಹಸ್ತದೊಂದಿಗೆ ಈ ಆಕರ್ಷಕ ಧಾರ್ಮಿಕ ಕೇಂದ್ರ ನಿರ್ಮಾಣಗೊಂಡಿದೆ ಎನ್ನುತ್ತಾರೆ ಸಮಿತಿಯ ಕಾರ್ಯದರ್ಶಿ ಕ್ರಿಜ್ವಲ್ ಕೋಟ್ಸ್ ತಿಳಿಸಿದ್ದಾರೆ.

ಎಲ್ಲರ ಸಹಕಾರದೊಂದಿಗೆ ಉತ್ತಮ ಧಾರ್ಮಿಕ ಕೇಂದ್ರವೊಂದು ನಿರ್ಮಾಣಗೊಳ್ಳುತ್ತಿರುವದು ನಿಜಕ್ಕೂ ಸಂತಸದ ವಿಷಯ ಎನ್ನುವ ಸಮಿತಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಿಲಿಪ್ ವಾಸ್, ಕೇರಳ-ಗೋವಾ ಶೈಲಿಯಲ್ಲಿ ಈ ಚರ್ಚ್ ನಿರ್ಮಾಣಗೊಂಡಿದ್ದು, ಮುಂದೊಂದು ದಿನ ಈ ಪ್ರಾರ್ಥನಾ ಕೇಂದ್ರ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಹಲವು ವರ್ಷಗಳಿಂದ ಸಣ್ಣ ಕೇಂದ್ರವೊಂದರಲ್ಲಿ ನಡೆಯುತ್ತಿದ್ದ ಧಾರ್ಮಿಕ ಪ್ರಾರ್ಥನಾ ಮಂದಿರ ಇದೀಗ ಎಲ್ಲಾ ಸೌಲಭ್ಯಗಳೊಂದಿಗೆ ತಲೆ ಎತ್ತಿ ನಿಂತಿರುವುದು ನಮ್ಮ ಸೌಭಾಗ್ಯ ಎನ್ನುತ್ತಾರೆ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮಗುರುಗಳು ಹಾಗೂ ಸಮಿತಿಯ ಅಧ್ಯಕ್ಷರಾದ ಫಾದರ್ ಮೈಕಲ್ ಮರಿ.

ಕಳೆದ 7 ವರ್ಷಗಳಿಂದ ನೂತನ ದೇವಾಲಯ ನಿರ್ಮಾಣ ಸಮಿತಿ ಮೂಲಕ ಈ ದೇವಾಲಯ ನಿರ್ಮಾಣವಾಗಿದ್ದು ಧರ್ಮಗುರುಗಳ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಕ್ರಿಜ್ವಲ್ ಕೋಟ್ಸ್, ಸಾರ್ವಜನಿಕ ಸಂಪರ್ಕಾಧಿಕಾರಿ ಫಿಲಿಪ್ ವಾಸ್, ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಆಲ್ಬರ್ಟ್ ಡಿಸೋಜ, ಜಂಟಿ ಕಾರ್ಯದರ್ಶಿಗಳಾಗಿ ಶಾಜಿ ಕೆ. ಜಾರ್ಜ್, ಬ್ಲೇಸಿ ಕ್ರಾಸ್ತ, ಸದಸ್ಯರುಗಳಾಗಿ ಎಂ.ಟಿ.ಜೋಸೆಫ್, ಶಿಬು ಥಾಮಸ್, ಐ.ಡಿ. ರಾಯ್, ಬಿ.ಎಸ್. ಶಾಂತಪ್ಪ, ವಿ.ವಿ. ಬಿನಾಯ್, ಸೋಮಿನಿ ಥಾಮಸ್, ಹೋಲಿ ಸ್ಪಿರಿಟ್ ಕಾನ್ವೆಂಟ್‍ನ ಸಿಸ್ಟರ್ ಸುಪೀರಿಯರ್ ಹಾಗೂ ತಪೋವನದ ಧರ್ಮಗುರುಗಳ ತಂಡ ಹೆಚ್ಚಿನ ಶ್ರಮವಹಿಸಿ ಈ ದೇವಾಲಯ ನಿರ್ಮಾಣಗೊಂಡಿದೆ ಎಂದು ಸಮಿತಿಯ ಅಧ್ಯಕ್ಷ ಮೈಕಲ್ ಮರಿ ತಿಳಿಸಿದ್ದಾರೆ.

- ಚಂದ್ರಮೋಹನ್