ವೀರಾಜಪೇಟೆ, ಮಾ. 11 : ಭ್ರೂಣ ಹತ್ಯೆಯನ್ನು ತಡೆಯುವ ಮೂಲಕ ಇದರ ಬಗ್ಗೆ ಜನ ಜಾಗೃತಿ ಯಾಗಬೇಕು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾದ ಟಿ.ಎಂ. ನಾಗರಾಜು ಹೇಳಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮ ಉದ್ಘಾಟಿಸಿದ ನಾಗರಾಜು ಇತ್ತೀಚೆಗೆ ಮಹಿಳೆಯರ ಸಂಖ್ಯೆ ಕಡಿಮೆ ಇರುವದರಿಂದ ಹೆಣ್ಣು ಮಗು ಎಂಬ ಬೇದ-ಬಾವ ಮಾಡದೆ ಗಂಡಿನಷ್ಟೆ ಹೆಣ್ಣಿಗೂ ಗೌರವ ದೊರೆತು ಆಕೆಯನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಅವರು ಮಾತನಾಡಿ ಪುರುಷನ ಜೀವನದಲ್ಲಿ ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮಗಳಾಗಿ ಮಹತ್ವದ ಪಾತ್ರ ವಹಿಸುತ್ತಾರೆ. ಮಹಿಳೆಗೆ ಸಲ್ಲ ಬೇಕಾದ ಸಾಮಾಜಿಕ ಗೌರವ ಮತ್ತು ನ್ಯಾಯವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಇಂದಿನ ಸಮಾಜ ನ್ಯಾಯಾಲಯ ಕಾರ್ಯ ನಿರ್ವಹಿಸು ವಂತಾಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕಾಮತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇತ್ತೀಚೆಗೆ ಮಹಿಳೆ ಎಲ್ಲಾ ರಂಗದಲ್ಲ್ಲೂ ತನ್ನ ಚಾಪು ಮೂಡಿಸಿದ್ದಾಳೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು ತನ್ನ ಕರ್ತವ್ಯವನ್ನು ನಿಭಾಯಿಸುತ್ತಿರುವದು ಸಮಾಜ ಮೆಚ್ಚುವಂತದ್ದು ಎಂದು ಹೇಳಿದರು.

ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಅವರು ಮಾತನಾಡಿ ಮಹಿಳಾ ದೌರ್ಜನ್ಯದ ವಿರುದ್ಧ ಮತ್ತು ಮಹಿಳೆಯರ ರಕ್ಷಣೆಗೆ ಹಲವು ಕಾನೂನುಗಳಿವೆ ಪ್ರತಿಯೊಂದು ಮಹಿಳೆಗೆ ಇದರ ಅರಿವು ಇರಬೇಕು ಎಂದು ಅಭಿಪ್ರಾಯಪಟ್ಟರು.

ವಕೀಲೆ ಹಾಜಿರಾ ಷರೀಫ್ “ಮಹಿಳೆಯರಿಗಾಗಿ ಕಾನೂನು” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.