ಮಡಿಕೇರಿ, ಮಾ. 10: ಪ್ರಸಕ್ತ ವರ್ಷ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‍ನಲ್ಲಿ ಗ್ರಾ.ಪಂ. ನೌಕರರಿಗೆ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿ ವಿಧಾನಸೌಧದ ಎದುರಿನಲ್ಲಿ ಅನಿರ್ಧಿಷ್ಟಾವಧಿಯ ಹೋರಾಟ ಆರಂಭಗೊಂಡಿದೆ. ತಾ. 28 ರಂದು ಕೊಡಗು ಜಿಲ್ಲೆಯ ಗ್ರಾ.ಪಂ. ನೌಕರರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 6022 ಗ್ರಾಮ ಪಂಚಾಯಿತಿಗಳ ಸುಮಾರು 56 ಸಾವಿರ ನೌಕರರು ಕನಿಷ್ಟ ವೇತನಕ್ಕಾಗಿ ಒತ್ತಾಯಿಸಿ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಯಾವದೇ ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲವೆಂದು ಆರೋಪಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದು, ಗ್ರಾ.ಪಂ. ಪಿಡಿಓಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲವೆಂದು ಟೀಕಿಸಿದರು.

ಕಳೆದ ಅನೇಕ ತಿಂಗಳುಗಳಿಂದ ವೇತನ ಸಿಗದೆ ನೌಕರರು ಸಂಕಷ್ಟದಲ್ಲಿದ್ದಾರೆ. 2016 ಆ.14 ರಂದು ಕಾರ್ಮಿಕ ಇಲಾಖೆ ಕನಿಷ್ಟ ವೇತನ ನಿಗದಿಪಡಿಸಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಮಂಡಿಸಲಿರುವ ಬಜೆಟ್‍ನಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನೀಡಲು ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದರು.

ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆÉಯಲು ರಾಜ್ಯವ್ಯಾಪಿ ಗ್ರಾಮ ಪಂಚಾಯಿತಿಗಳ ನೌಕರರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸುಮಾರು 800 ಕ್ಕೂ ಅಧಿಕ ನೌಕರರಿದ್ದು, ಇವರುಗಳು ತಾ. 28 ರಂದು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತ್ಯೇಕ ಅನುದಾನದ ಬಗ್ಗೆ ಅಧಿವೇಶನದಲ್ಲಿ ಅನುಮೋದನೆ ದೊರೆಯುವವರೆಗೆ ಮುಷ್ಕರ ಮುಂದುವರಿಯಲಿದೆ ಎಂದು ಪಿ.ಆರ್. ಭರತ್ ತಿಳಿಸಿದರು.

ಬಜೆಟ್ ಮಂಡನೆಗೂ ಮೊದಲು ಬಂಡವಾಳಶಾಹಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಗ್ರಾ.ಪಂ ನೌಕರರೊಂದಿಗೂ ಸರ್ಕಾರ ಸಭೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

ಉಪಾಧ್ಯಕ್ಷ ಕೆ.ಎಂ. ಚಿಣ್ಣಪ್ಪ ಮಾತನಾಡಿ, ಕೊಡ್ಲಿಪೇಟೆ ಗ್ರಾ.ಪಂ ವ್ಯಾಪ್ತಿಯಲ್ಲಿ 30 ದಿನಗಳ ದುಡಿಮೆಗೆ 26 ದಿನದ ಸಂಬಳ ನೀಡಲಾಗುತ್ತಿದೆ. ಅಲ್ಲದೆ ಕೆಲಸದ ಒತ್ತಡ ಹೇರಲಾಗುತ್ತಿದೆಯೆಂದು ಆರೋಪಿಸಿದರು.