ಮಡಿಕೇರಿ, ಮಾ. 11: ಹಿಂದೂ ಧರ್ಮದಲ್ಲಿ ಹಲವು ಜಾತಿಗಳಿದ್ದು, ಸಂಘಟಿತ ಸಮಾಜದಿಂದ ಮಾತ್ರ ಜಾತಿ - ಧರ್ಮ ಉಳಿಯಲು ಸಾಧ್ಯವಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಹಿಂದೂ ಜಾಗರಣಾ ವೇದಿಕೆಯ ಘಟಕಗಳ ಉದ್ಘಾಟನೆ ಮತ್ತು ಹಿಂದೂ ಸಮಾಜೋತ್ಸವವನ್ನು ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದರು.

ದೇಶದಲ್ಲಿ ಹಲವು ಮತ, ಸಂಪ್ರದಾಯಗಳಿದ್ದರೂ, ಹಿಂದೂ ಧರ್ಮ ಸನಾತನ ಧರ್ಮವಾಗಿದೆ. ಇಂದು ಹಲವು ದೇಶ ವಿರೋಧಿ ವ್ಯಕ್ತಿಗಳು ದೇಶದಲ್ಲಿ ಅಭದ್ರತೆಯನ್ನು ಸೃಷ್ಟಿಸಿ ಭಯೋತ್ಪಾದನೆ ಮೂಲಕ ರಕ್ತಪಾತ ಸೃಷ್ಟಿಸುತ್ತಿದೆ. ಐಸಿಸ್ ಸಂಘಟನೆ ಜಾಗತಿಕ ಇಸ್ಲಾಮೀಕರಣಕ್ಕೆ ಮುಂದಾಗಿದ್ದು, ಭಾರತದಲ್ಲಿ ಕೂಡ ತನ್ನ ಕಬಂಧ ಬಾಹುವನ್ನು ವಿಸ್ತರಿಸಿ ಕೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಹಿಂದೂಗಳು ಸಂಘಟಿತರಾಗಿ ತಮ್ಮ ಜಾತಿ, ಭಾಷೆ, ಸಂಸ್ಕøತಿಯೊಂದಿಗೆ ಧರ್ಮವನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದರು. ವೇದಿಕೆಯ ಮಡಿಕೇರಿ ತಾಲೂಕು ಸಂಚಾಲಕ ಅಜಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಕೊರವಂಡ ಮಾಚಯ್ಯ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಚಾಲಕ ಉಲ್ಲಾಸ್, ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಸಿ. ಪೊನ್ನಪ್ಪ ಉಪಸ್ಥಿತರಿದ್ದರು.

ವಿಜು ದೇಶ ಭಕ್ತಿಗೀತೆ, ರವಿಭೂತನಕಾಡು ವಂದೇ ಮಾತರಂ ಹಾಡಿದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.