ಮಾನ್ಯರೆ,

ಮುಕ್ತ ಮಾರುಕಟ್ಟೆಯಾದ ನಂತರ ಕಾಫಿಯ ದರ ಹೆಚ್ಚಾದರೂ ಕೆಲವು ವ್ಯಾಪಾರಿಗಳು ನಾನಾ ವಿಧದಲ್ಲಿ ಬೆಳೆಗಾರರನ್ನು ವಂಚಿಸುತ್ತಾ ಬಂದಿದ್ದಾರೆ. ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿದ ನಂತರವಂತೂ ಈ ಬೆಳವಣಿಗೆ ಹೆಚ್ಚಾಗಿದ್ದು, ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.

ಕೆಲವು ವರ್ಷಗಳಿಂದ ಕಾಫಿಗೆ “ಔಟ್ ಟರ್ನ್” ಮತ್ತು “ಮಾಕ್ಸರ್” ಎಂಬ ಆಂಗ್ಲ ಪದಗಳು ಹುಟ್ಟಿಕೊಂಡಿದ್ದು, ಈ ಎರಡು ಮಾರಕ ಶಬ್ಧಗಳ ಬಗ್ಗೆ ಶೇ. 90 ರಷ್ಟು ಮುಗ್ದ ಬೆಳೆಗಾರರಿಗೆ ಮಾಹಿತಿ ಇಲ್ಲ. ಈ ಎರಡು ಪದಗಳೇ ಬೆಳೆಗಾರರನ್ನು ವಂಚಿಸುತ್ತಿರುವದಕ್ಕೆ ಪ್ರಮುಖ ಕಾರಣವಾಗಿದೆ.

ವ್ಯಾಪಾರಿಗಳು ಕಾಫಿಯನ್ನು ಪರೀಕ್ಷಿಸುತ್ತಾರೆ ಮತ್ತು ದರವನ್ನು ನಿಗದಿ ಮಾಡುತ್ತಾರೆ. ಮನೆಯಲ್ಲಿ ಔಟ್ ಟರ್ನ್ ಯಂತ್ರದಲ್ಲಿ ಕಾಫಿಯನ್ನು ಪರೀಕ್ಷಿಸಿದಾಗ 28 ಕೆ.ಜಿ. ತೂಗುವ ಕಾಫಿ ವ್ಯಾಪಾರಿಗಳ ಔಟ್ ಟರ್ನ್‍ನಲ್ಲಿ 27 ಕೆ.ಜಿ. ಮಾತ್ರ ತೂಗುತ್ತದೆ. ಇದರಿಂದ 1 ಕೆ.ಜಿ. ಕಾಫಿ ಬೇಳೆಯ ಬೆಲೆ ರೂ. 135 ರ ಪ್ರಕಾರ ಬೆಳೆಗಾರರಿಗೆ ನಷ್ಟ ಉಂಟಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ಬಡ, ಮಧ್ಯಮ ವರ್ಗದ ಬೆಳೆಗಾರರು ಕಾಫಿ ಮಾರಲು ಹೋದರೆ ಆ ಕಾಫಿಗೆ ಔಟ್ ಟರ್ನ್ ಬೇಡ ಎಂದು ವ್ಯಾಪಾರಿಗಳು ಸಮಜಾಯಿಷಿಕೆ ನೀಡಿ ದರ ನಿಗದಿಪಡಿಸುತ್ತಾರೆ. ಈ ರೀತಿ ಮಾಡುವದರಿಂದಲೂ ಬೆಳೆಗಾರರಿಗೆ ನಷ್ಟವಾಗುತ್ತಿದೆ.

10-20 ಚೀಲ ಕಾಫಿ ಇದ್ದರೆ ಮಾತ್ರ ವ್ಯಾಪಾರಿಗಳು ಔಟ್ ಟರ್ನ್ ನೋಡುವ ಪರಿಸ್ಥಿತಿ ಇದೆ. ಒಂದು ಚೀಲ ಕಾಫಿಯ ಮಾರುಕಟ್ಟೆದರ ಅಂದಾಜು ರೂ. 3,800 ಇದ್ದರೆ ವ್ಯಾಪಾರಿಗಳು ನೀಡುವ ದರ ರೂ. 3600-3650 ಮಾತ್ರ. ಕಾಫಿ ನೀಡಿದ ತಕ್ಷಣ ಹಣ ಬೇಕು ಎಂದು ಬೆಳೆಗಾರರು ಕೇಳಿದರೆ ಚೀಲವೊಂದಕ್ಕೆ ರೂ. 50 ಕಡಿಮೆ ನೀಡುವದಾಗಿ ಅಥವಾ ಬ್ಯಾಂಕ್ ಖಾತೆಗೆ ಜಮಾ ಮಾಡುವದಾಗಿ ಹೇಳುತ್ತಾರೆ.

ವರ್ಷಪೂರ್ತಿ ದುಡಿದು ಹಣದ ತುರ್ತು ಅಗತ್ಯ ಇರುವ ಬೆಳೆಗಾರರು ವ್ಯಾಪಾರಿಗಳ ಮುಂದೆ ಹಣಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿ ಇದೆ. ಔಟ್ ಟರ್ನ್ ಮತ್ತು ಮಾಕ್ಸರ್ ಕುರಿತು ಕಾಫಿ ಮಂಡಳಿ ಬೆಳೆಗಾರರಿಗೆ ಯಾವದೇ ಮಾಹಿತಿಯನ್ನು ನೀಡುತ್ತಿಲ್ಲ.

ಕೊಡಗು ಕಾಫಿ ಬೆಳೆಗಾರರ ಸಹಾಕಾರ ಸಂಘ ಕೂಡ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಣದ ಅಗತ್ಯ ಇರುವ ಬೆಳೆಗಾರರಿಂದ ಕಾಫಿ ಖರೀದಿಸಿ ಮುಂಗಡ ಹಣ ನೀಡಿ, ಅವರುಗಳ ಕಾಫಿಯನ್ನು ಶೇಖರಣೆ ಮಾಡುವ ಕೆಲಸವನ್ನು ಕಾಫಿ ಬೆಳೆಗಾರರ ಸಹಕಾರ ಸಂಘ ಮಾಡಬೇಕು ಮತ್ತು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು.

- ಸೂದನ ಈರಪ್ಪ, ಪಾಲೂರು