ಕುಶಾಲನಗರ, ಮಾ. 12: ಕುಶಾಲನಗರವನ್ನು ಕೇಂದ್ರವನ್ನಾಗಿಸಿ ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಹಲವು ವರ್ಷಗಳ ಹೋರಾಟದ ಸ್ವರೂಪ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಕ್ಷೀಣಗೊಂಡಿದೆ. ಹಲವು ಕಾರಣಗ ಳೊಂದಿಗೆ ಹೋರಾಟಗಾರರಲ್ಲಿ ಆಸಕ್ತಿ ಕೂಡ ಕಣ್ಮರೆಯಾಗುವದರೊಂದಿಗೆ ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ನೂತನ 43 ತಾಲೂಕುಗಳಿಗೆ ಕಾಯಕಲ್ಪ ನೀಡುವ ಪ್ರಸ್ತಾವನೆಯಿದ್ದು, ಹಳೆಯ ಬೇಡಿಕೆಯಾದ ಕಾವೇರಿ ತಾಲೂಕು ರಚನೆ ಪ್ರಸ್ತಾವನೆ ಮಾತ್ರ ನೆನೆಗುದಿಗೆ ಬಿದ್ದಿದೆ. ಈ ಮೂಲಕ ಜಿಲ್ಲೆಯ ಜನತೆಯ ನೂತನ ತಾಲೂಕುಗಳ ರಚನೆಯ ಕನಸು ಕನಸಾಗಿಯೇ ಉಳಿಯುವಂತಾಗಿದೆ.

ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕಾವೇರಿ ತಾಲೂಕು ರಚನೆಗೆ ಒಲವು ಹೊಂದಿದ್ದರು. ನಂತರ ರಾಜ್ಯ ಕಂದಾಯ ಸಚಿವರಾಗಿದ್ದ ಶ್ರೀಕಂಠಯ್ಯ ಅವರಿಂದ ರಾಜ್ಯದಲ್ಲಿ ಹೊಸ ತಾಲೂಕು ರಚನೆಗೆ ಪ್ರಸ್ತಾಪ ಬಂದಾಗಲಂತೂ ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕುಗಳ ರಚನೆಗೆ ಹುರುಪು ಗರಿಗೆದರಿತ್ತು. ನಂತರದ ದಿನಗಳಲ್ಲಿ ಹೋರಾಟ ಸಮಿತಿ ಸರಕಾರದ ಬಳಿ ನಿಯೋಗ ಕೂಡ ತೆರಳಿತ್ತು.

ಅಂದಿನ 20*20 ಸರ್ಕಾರದ ಕೊನೆಯ ಅವಧಿಯಲ್ಲಿ ಘೋಷಣೆಯಾಗಿದ್ದ 43 ಹೊಸ ತಾಲೂಕುಗಳಿಗೆ ಕಾಯಕಲ್ಪ ನೀಡುವ ಕಾರ್ಯ ಮುಂಬರುವ ಬಜೆಟ್‍ನಲ್ಲಿ ಪ್ರಸ್ತಾಪವಾಗಲಿದ್ದು, ಕೊಡಗು ಜಿಲ್ಲೆಯಲ್ಲಿ ಮಾತ್ರ ಯಾವದೇ ನೂತನ ತಾಲೂಕುಗಳ ರಚನೆಯಾಗುವ ಸಾಧ್ಯತೆ ಕಂಡುಬರುತ್ತಿಲ್ಲ.

ರಾಜ್ಯದಲ್ಲಿ 60 ಹೊಸ ತಾಲೂಕುಗಳ ರಚನೆಗೆ ಬೇಡಿಕೆ ಇದ್ದರೂ ಇದೀಗ ಕೇವಲ 43 ಹೊಸ ತಾಲೂಕು ರಚನೆಗೆ ಕಳೆದ ಬಜೆಟ್‍ನಲ್ಲಿ ಪ್ರಸ್ತಾವನೆ ಪ್ರಕಟಗೊಂಡ ಬೆನ್ನಲ್ಲೆ ಈ ಭಾಗದ ನಾಗರಿಕರಲ್ಲಿ ಒಂದು ರೀತಿಯ ನಿರಾಶೆಯ ಭಾವನೆಗಳು ವ್ಯಕ್ತಗೊಂಡಿತ್ತು. ಸರಕಾರ ಈ ಹಿಂದೆ ರಚಿಸಿದ್ದ ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿ ರಾಜ್ಯದ ಎಲ್ಲೆಡೆ ತೆರಳಿ ಹೊಸ ತಾಲೂಕು ರಚನೆ ಪ್ರಸ್ತಾಪ ವರದಿ ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಿತ್ತಾದರೂ ಕುಶಾಲನಗರ ಮತ್ತು ಪೊನ್ನಂಪೇಟೆಗೆ ಈ ಸಮಿತಿ ಭೇಟಿ ನೀಡದಿರುವದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ 2013 ರಲ್ಲಿ ಕುಶಾಲನಗರ ಬಂದ್ ಕೂಡ ನಡೆಸಿತ್ತು. ನಂತರದ ದಿನಗಳಲ್ಲಿ ರಾಜಕೀಯ ನುಸುಳಿ ಉದ್ದೇಶ ತಿರುವು ಪಡೆಯುವದರೊಂದಿಗೆ ಹೋರಾಟ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು.

ಕುಶಾಲನಗರ - ಸುಂಟಿಕೊಪ್ಪ ಹೋಬಳಿ ಪ್ರದೇಶಗಳನ್ನು ಸೇರಿಸಿಕೊಂಡು ತಾಲೂಕು ರಚನೆಯ ನಾಗರೀಕರ ಬೇಡಿಕೆ ಕನಸ್ಸಾಗಿಯೇ ಉಳಿಯುವಂತಾಗಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಕುಶಾಲನಗರ - ಸುಂಟಿಕೊಪ್ಪ ಹೋಬಳಿಗಳ ದೂರದ ಗ್ರಾಮಗಳು ತಾಲೂಕು ಕಚೇರಿಯನ್ನು ಸಂಪರ್ಕಿಸಬೇಕಾದರೆ ಕನಿಷ್ಟ 50 ಕಿ.ಮೀ ಅಂತರ ಕ್ರಮಿಸಬೇಕಾಗುತ್ತದೆ. ಕುಶಾಲನಗರದಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ಸ್ಥಾಪನೆಗೆ ಹಲವು ಬಾರಿ ಮುಖ್ಯಮಂತ್ರಿಗಳು, ಕಂದಾಯ ಮಂತ್ರಿಗಳ ಬಳಿ ನಿಯೋಗ ತೆರಳಿದರೂ ಯಾವದೇ ಪ್ರಯೋಜನವಾಗಿಲ್ಲ. ಸೋಮವಾರಪೇಟೆ ಪಟ್ಟಣದಿಂದ ವಿವಿದೆಡೆ ತೆರಳಲು ಸಮರ್ಪಕವಾಗಿ ವಾಹನ ವ್ಯವಸ್ಥೆ ಇಲ್ಲದ ಹಿನ್ನೆಲೆಯಿಂದ ಗ್ರಾಮೀಣ ಜನತೆ ತಾಲೂಕು ಕೇಂದ್ರಕ್ಕೆ ಬಂದು ಹೋಗುವದು ಒಂದು ರೀತಿ ಕಷ್ಟಕರ. ನೂತನ ತಾಲೂಕು ರಚನೆಯ ಸಂಬಂಧ ಕಳೆದ 20 ವರ್ಷಗಳಿಗಿಂತಲೂ ಅಧಿಕ ಕಾಲದ ಹೋರಾಟ ನೀರಿನಲ್ಲಿ ಹೋಮ ಹಾಕಿದಂತಾಗಿದೆ ಎನ್ನಬಹುದು.

ತಾಲೂಕು ರಚನೆಗೆ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಕುಶಾಲನಗರವನ್ನು ಸರ್ಕಾರ ಕೈಬಿಟ್ಟಿರುವದು ಮಾತ್ರ ದುರ್ದೈವದ ಸಂಗತಿಯಾಗಿದ್ದು, ಸ್ಥಳೀಯರು ಸೇರಿದಂತೆ ಕೊಡಗು ಜಿಲ್ಲಾ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಕೂಡ ವಿಫಲರಾಗಿ ದ್ದಾರೆ ಎನ್ನುವ ಆರೋಪಗಳು ನಾಗರೀಕರಿಂದ ಕೇಳಿಬರುತ್ತಿದೆ.

ಕುಶಾಲನಗರ - ಸುಂಟಿಕೊಪ್ಪ ಹೋಬಳಿಯ ಕೆಲ ಪ್ರದೇಶಗಳನ್ನು ಸೇರಿಸಿಕೊಂಡು ಕಾವೇರಿ ತಾಲೂಕು ರಚಿಸುವ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಕಾವೇರಿ ಹೋರಾಟ ಸಮಿತಿ ಹಲವು ಹಂತಗಳಲ್ಲಿ ಹೋರಾಟ ನಡೆಸಿತ್ತು. ಶಿರಂಗಾಲದಿಂದ ನೆಲ್ಲಿಹುದಿಕೇರಿ ಹಾಗೂ ಸುಂಟಿಕೊಪ್ಪ ಹೋಬಳಿಯ ಹಲವು ವ್ಯಾಪ್ತಿಗಳನ್ನು ಸೇರಿಸಿಕೊಂಡು ನೂತನ ಕಾವೇರಿ ತಾಲೂಕು ರಚನೆಗಾಗಿ ಹೋರಾಟ ಸಮಿತಿ ಆಗ್ರಹಿಸಿತ್ತು.

ಕಾವೇರಿ ತಾಲೂಕು ರಚನೆಗೆ ಎಲ್ಲಾ ಮಾನದಂಡಗಳೊಂದಿಗೆ ಸರಕಾರಕ್ಕೆ ಮತ್ತೊಮ್ಮೆ ನಿಯೋಗ ತೆರಳಿ ಸರಕಾರಕ್ಕೆ ಮನವೊಲಿಕೆ ಮಾಡಿಕೊಡಲು ಚಿಂತನೆ ಹರಿಸಲಾಗಿದೆ ಎಂದು ನೂತನ ಕಾವೇರಿ ತಾಲೂಕು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ.ನಾಗೇಂದ್ರಬಾಬು ತಿಳಿಸಿದ್ದಾರೆ. ನೂತನ ಕಾವೇರಿ ತಾಲೂಕು ರಚನೆಯಾದಲ್ಲಿ ಆ ವ್ಯಾಪ್ತಿಯ ಜನತೆಗೆ ಅನುಕೂಲ ಉಂಟಾಗಲಿದೆ ಎನ್ನುವದು ಕೊಪ್ಪ, ಬೈಲುಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರೀಕರ ಹಾಗೂ ಪ್ರಮುಖರ ಒತ್ತಾಸೆಯಾಗಿದೆ. ಈ ಸಂಬಂಧ ಈ ಭಾಗದ ಹಲವರು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದು, ಸರ್ಕಾರದ ಮಟ್ಟದಲ್ಲಿ ವ್ಯವಹರಿಸುವ ಬಗ್ಗೆ ಈಗಾಗಲೆ ಚಿಂತನೆ ಹರಿಸಲಾಗಿದೆ.

ಹಿಂದಿನ ಸರ್ಕಾರ ನೂತನ ತಾಲೂಕುಗಳ ಘೋಷಣೆ ಮಾಡಿದ್ದರೂ ಅವುಗಳ ಅಭಿವೃದ್ಧಿಗೆ ಅಗತ್ಯ ಹಣಕಾಸು ನೆರವು ನೀಡದ ಹಿನ್ನಲೆಯಲ್ಲಿ ಕೇವಲ ಘೋಷಣೆ ಯಾಗಿಯೇ ಉಳಿದಿರುವದು ಪ್ರಶ್ನೆಯಾಗಿದೆ. ಇದೀಗ ತಾಲೂಕು ರಚನೆ ಸಂಬಂಧ 4 ಸಮಿತಿಗಳು ಸರ್ಕಾರಕ್ಕೆ ನೀಡಿದ ಪ್ರತ್ಯೇಕ ವರದಿಗಳಲ್ಲಿ 38 ನೂತನ ತಾಲೂಕುಗಳ ಹೆಸರು ಮಾತ್ರ ವರದಿಗಳಲ್ಲಿ ಬಂದಿರುವದು ಅಲ್ಲದೆ ಈ ಸಂಬಂಧ ಈ ಸಾಲಿನ ಬಜೆಟ್‍ನಲ್ಲಿ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ. ನೂತನ ತಾಲೂಕು ರಚನೆಯಾದಲ್ಲಿ ಹತ್ತು ಹಲವು ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಕನಿಷ್ಟ ತಲಾ 25 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ ಎನ್ನುವದು ರಾಜ್ಯ ಸರಕಾರದ ಅಭಿಪ್ರಾಯವಾಗಿದೆ.

ಕೊಡಗು ಜಿಲ್ಲೆಯಲ್ಲಿ ಮೂರು ಮಂದಿ ಶಾಸಕರ ಕ್ಷೇತ್ರ ಕೇವಲ ಎರಡು ಶಾಸಕರಿಗೆ ಮೀಸಲಾಗಿದೆ. ನೂತನ ತಾಲೂಕು ರಚನೆಗಾಗಿ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿ ದಶಕಗಳೇ ಸಂದಿದೆ.

ನೂತನÀ ತಾಲೂಕು ರಚನೆ ಜನಸಂಖ್ಯೆ ಆಧಾರದಲ್ಲಿ ನಡೆಯುವದರಿಂದ ಜಿಲ್ಲೆಯ ನೂತನ ತಾಲೂಕು ರಚನೆಗೆ ಅಗತ್ಯ ಜನಸಂಖ್ಯೆ ಕೊರತೆಯಿದೆ ಎನ್ನುವದು ಸರಕಾರದ ವಾದವಾಗಿದೆ. ಕುಶಾಲನಗರ ಸಮೀಪದ ಕಾವೇರಿ ನದಿ ತಟದ ಹಾರ್ನಳ್ಳಿ ಹೋಬಳಿ, ಸೋಮವಾರಪೇಟೆ ವ್ಯಾಪ್ತಿಗೆ ಹಾಸನದ ಕೆಲವು ಹಳ್ಳಿಗಳನ್ನು ಸೇರ್ಪಡೆಗೊಳಿಸು ವದರೊಂದಿಗೆ ಕ್ಷೇತ್ರ ಪುನರ್ ವಿಂಗಡನೆಯಾದಲ್ಲಿ ಸೋಮವಾರಪೇಟೆಗೆ ಓರ್ವ ಶಾಸಕರ ಕ್ಷೇತ್ರ ಮತ್ತೆ ಸೇರ್ಪಡೆಗೊಳ್ಳುವದು ಇನ್ನೊಂದೆಡೆ ಸುಳ್ಯ ತಾಲೂಕಿನ ಪೆರಾಜೆ ವ್ಯಾಪ್ತಿ ಜಿಲ್ಲೆಗೆ ಒಳಪಡುವದರೊಂದಿಗೆ ಜನಸಂಖ್ಯೆ ಆಧಾರದಲ್ಲಿ ಕೊಡಗು ಜಿಲ್ಲೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಪಡೆಯುವದು ಕೂಡ ನಿಶ್ಚಿತ ಎನ್ನುವದು ಕೆಲವರ ವಾದ.

ನೂತನ ತಾಲೂಕು ರಚನೆ ವಿಷಯದಲ್ಲಿ ರಾಜಕೀಯ ಮುಖಂಡರು, ಜನಪ್ರತಿನಿಧಿಗಳ ರಾಜಕೀಯ ಚದುರಂಗದಾಟದಲ್ಲಿ ಈ ಭಾಗದ ಜನತೆ ಮಾತ್ರ ದಾಳವಾಗಿರುವದು ನಿಜಕ್ಕೂ ದುರಂತ ಎನ್ನಬಹುದು.