ಮಡಿಕೇರಿ, ಮಾ. 12: ಶನಿವಾರಸಂತೆ ಗ್ರಾ.ಪಂ.ಗೆ ಸೇರಿದ ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದವನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ಶೀಘ್ರ ಆದೇಶವನ್ನು ಹೊರಡಿಸಬೇಕೆಂದು ತಾ.ಪಂ. ಸದಸ್ಯ ಅನಂತ ಕುಮಾರ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಣದ ವಿಚಾರಣೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮುಗಿದಿದ್ದರೂ, ಆದೇಶ ನೀಡಲು ಜಿಲ್ಲಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ 10 ದಿನಗಳ ಒಳಗಾಗಿ ಸರಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳದಿದ್ದಲ್ಲಿ ಶನಿವಾರಸಂತೆಯ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಶನಿವಾರಸಂತೆ ಗ್ರಾ.ಪಂ.ಗೆ ಸೇರಿದ ವಾಣಿಜ್ಯ ಸಂಕೀರ್ಣವೊಂದನ್ನು 1999ರಲ್ಲಿ ಗುತ್ತಿಗೆದಾರರೊಂದಿಗೆ ಕರಾರು ಮಾಡಿಸಿಕೊಂಡು 14 ವರ್ಷಗಳಿಗಾಗಿ ಬಿಟ್ಟು ಕೊಡಲಾಗಿತ್ತು. ಈ ವಾಣಿಜ್ಯ ಸಂಕೀರ್ಣದ ಅವಧಿ 2015ರ ಮಾ. 24 ಕ್ಕೆ ಮುಗಿದಿದ್ದರೂ ಗುತ್ತಿಗೆದಾರರು ಕಟ್ಟಡವನ್ನು ಬಿಟ್ಟುಕೊಟ್ಟಿಲ್ಲ. ಅಲ್ಲದೆ ವಾಣಿಜ್ಯ ಮಳಿಗೆಗಳಿಂದ ಬರುವ ಸುಮಾರು ರೂ. 30 ಸಾವಿರ ತಿಂಗಳ ಬಾಡಿಗೆಯನ್ನು ತಾವೇ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ವಾಣಿಜ್ಯ ಸಂಕೀರ್ಣವನ್ನು ವಶಕ್ಕೆ ಪಡೆಯಲು ತಹಶೀಲ್ದಾರರು ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಅಪರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಬೀಗಮುದ್ರೆ ಹಾಕಿ ಮಳಿಗೆ ಕೀಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಿದ್ದರು. ಆದರೆ ಗುತ್ತಿಗೆದಾರರು ಈ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಮೂರು ತಿಂಗಳಲ್ಲಿ ಈ ಪ್ರಕರಣವನ್ನು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುವಂತೆ ಆದೇಶಿಸಿತ್ತು. ಅದರಂತೆ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿಗಳು, ಸಂಕೀರ್ಣಕ್ಕೆ ಸಂಬಂಧಿಸಿದ 24/1 ಸೆಂಟ್ ಜಾಗ ಪಂಚಾಯಿತಿಗೆ ಹಾಗೂ 74/1ಸೆಂಟ್ ಜಾಗ ಕಂದಾಯ ಇಲಾಖೆಗೆ ಸೇರಿದ್ದೆಂದು ತಿಳಿಸಿ, ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ತಹಶೀಲ್ದಾರರು ತೆರವುಗೊಳಿಸಬೇಕೆಂದು ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ ಗುತ್ತಿಗೆದಾರರು ಮತ್ತೆ ಜಿಲ್ಲಾಧಿಕಾರಿಯವರ ನ್ಯಾಯಾಲಯಕ್ಕೆ ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಲ್ಲಿಯೂ ವಿಚಾರಣೆ ಮುಗಿದಿದ್ದು, ಆದೇಶ ನೀಡಲು ಮಾತ್ರ ಬಾಕಿ ಇದೆ ಎಂದು ಅನಂತ ಕುಮಾರ್ ವಿವರಿಸಿದರು.

ಆದರೆ ಜಿಲ್ಲಾಧಿಕಾರಿಯವರು ಕಳೆದ ಮೂರು ತಿಂಗಳುಗಳಿಂದ ಈ ಸಂಬಂಧದ ಆದೇಶ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸರಕಾರದ ಜಾಗವನ್ನು ವಶಕ್ಕೆ ಪಡೆಯಲು ಅಧಿಕಾರಿಗಳೇ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲೂ ಅಸಮಾಧಾನ ಮೂಡಿದೆ. ಗುತ್ತಿಗೆದಾರರು ರಾಜಕೀಯ ಮುಖಂಡರಾಗಿದ್ದು, ಪ್ರಭಾವ ಬಳಸಿ ಸರಕಾರದ ಆಸ್ತಿಯನ್ನು ತಮ್ಮ ಆಸ್ತಿಯಂತೆ ಅನುಭವಿಸುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಈ ಬಗ್ಗೆ ಹಲವು ಬಾರಿ ಶಾಸಕರ ಗಮನಕ್ಕೆ ತರಲಾಗಿದ್ದರೂ, ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಅನಂತಕುಮಾರ್ ಆರೋಪಿಸಿದರು.

ಗೋಷ್ಠಿಯಲ್ಲಿ ಶನಿವಾರಸಂತೆ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ರಜನಿ, ಸಂಗೀತ ಹಾಗೂ ಆದಿತ್ಯ, ರವಿ ಉಪಸ್ಥಿತರಿದ್ದರು.