ಆಲೂರು-ಸಿದ್ದಾಪುರ/ಒಡೆಯನಪುರ, ಮಾ. 12: ವಿದ್ಯಾರ್ಥಿಗಳಲ್ಲಿ ವಿನಯವಂತಿಕೆ ಇದ್ದರೆ ಮಾತ್ರ ಪರಿಪೂರ್ಣ ಶಿಕ್ಷಣವನ್ನು ಪಡೆಯಬಹುದು ಎಂದು ಹಾಸನದ ಎಲ್.ವಿ. ಸರ್ಕಾರಿ ಪಾಲಿಟೆಕ್ನಿಕ್‍ನ ಉಪನ್ಯಾಸಕ ಎಸ್. ಗುರುಪ್ರಸಾದ್ ಅಭಿಪ್ರಾಯಪಟ್ಟರು ಸಮೀಪದ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಪರಿಪೂರ್ಣ ಶಿಕ್ಷಣವನ್ನು ಪಡೆದು ವಿದ್ಯಾರ್ಥಿಗಳು ಮತ್ತು ಯುವಕರು ಇತರರಿಗೆ ಆದರ್ಶರಾಗಬೇಕು ಎಂದರು.

ಕೃಷಿಕ ಡಾ. ರಾಮಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು, ನಮ್ಮ ದೇಶ ಎಷ್ಟೇ ಆಧುನಿಕವಾಗಿ, ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ್ದರೂ ಇದಕ್ಕೆಲ್ಲಾ ನಮಗೆ ಅನ್ನ ಕೊಡುವ ರೈತರೆ ಕಾರಣರಾಗಿರುತ್ತಾರೆ ಎಂಬದನ್ನು ಮರೆಯಬಾರದೆಂದರು. ತಮಗಿರುವಷ್ಟು ಜಾಗದಲ್ಲಿ ಸಸ್ಯ ಸಂಪತ್ತನ್ನು ಬೆಳೆಸಿ, ಕೃಷಿಯನ್ನು ಮಾಡಿದರೆ ಪರಿಸರದ ಜೊತೆಯಲ್ಲಿ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ಶನಿವಾರಸಂತೆ ಕೃಷಿ ಉಪಕರಣಗಳ ಆವಿಷ್ಕಾರಕ ಎ.ಡಿ. ಮೋಹನ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದೇಶಭಿಮಾನ, ಸಂಸ್ಕøತಿ, ಮಾನವಿಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದ ಅಭಿವೃದ್ಧಿಯ ಬಗ್ಗೆ ಕಳಕಳಿ ಹೊಂದಿರಬೇಕು. ಶಿಕ್ಷಣ ಮುಗಿದ ನಂತರ ಆದಷ್ಟು ತಮ್ಮ ದೇಶದಲ್ಲೆ ಉದ್ಯೋಗವನ್ನು ಅವಲಂಬಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ದೊಡ್ಡಮಗ್ಗೆ ಗ್ರಾಮದ ಸಾವಯವ ಕೃಷಿಕ ಎಂ.ಸಿ.ರಂಗಸ್ವಾಮಿ, ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಿ. ನಾಗಪ್ಪ, ಕಾಲೇಜು ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಮಾತನಾಡಿದರು. ವಿದ್ಯಾಸಂಸ್ಥೆ ಉಪಾಧ್ಯಕ್ಷ ಜಗನ್‍ಪಾಲ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.