ನಾಪೋಕ್ಲು, ಮಾ. 12: ದೇವಾಲಯಗಳು ಸಮಾಜದ ಶ್ರದ್ಧಾಕೇಂದ್ರ, ಅದು ಸಮಾಜವನ್ನು ಸಂಘಟಿಸುತ್ತದೆ. ದೇವಾಲಯಗಳು ಅಭಿವೃದ್ಧಿಯಾದರೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಹೇಳಿದರು.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜ ಗೋಪುರವನ್ನು ಉದ್ಘಾಟಿಸಿ, ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮಮಕ್ಕೆ ಚಾಲನೆ ನೀಡಿ ಅವರು ಆರ್ಶೀವಚನ ನೀಡಿದರು. ಆಧುನಿಕ ಯುಗದಲ್ಲಿ ಧಾರ್ಮಿಕ ನಂಬಿಕೆಗಳು ಕಡಿಮೆಯಾಗಬಹುದು ಎಂದು ಆತಂಕ ಇತ್ತು.

ಆದರೆ ದೇವಾಲಯಗಳ ಅಭಿವೃದ್ಧಿಯ ಮೂಲಕ ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು, ಶ್ರದ್ಧೆ ಮತ್ತು ಭಕ್ತಿ ಹೆಚ್ಚುತಿರುವದು ಸಂತಸದ ವಿಚಾರ ಎಂದರು. ಆಧುನಿಕ ಕಾಲಘಟ್ಟದಲ್ಲಿ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳು ಹೆಚ್ಚುತ್ತಿರುವದು ಉತ್ತಮ ಬೆಳವಣಿಗೆ. ದೇವರನ್ನು ಕಡೆಗಣಿಸಿದರೆ ಪ್ರಕೃತಿಯು ಮುನಿಸುಕೊಂಡು ಕಷ್ಟ-ನಷ್ಟಗಳು ಉಂಟಾಗುತ್ತದೆ. ದೇವಾಲಯಗಳು ಜೀರ್ಣೋದ್ಧಾರ ಗೊಂಡು ಆರಾಧನೆ ಹೆಚ್ಚಿದರೆ ಸಮಾಜ ಸುಭಿಕ್ಷವಾಗುತ್ತದೆ ಎಂದು ಅವರು ಹೇಳಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯಾಧ್ಯಕ್ಷ ಸೋಮಶೇಖರ ಕೊೈಂಗಾಜೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಯು.ಎಂ. ಕಿಶೋರ್‍ಕುಮಾರ್, ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.