ಸುಂಟಿಕೊಪ್ಪ, ಮಾ. 12: ದುರ್ಬಲ ವರ್ಗದ ಜನರ ಸಂಕಷ್ಟವನ್ನು ಆರಿತ ಸರಕಾರಗಳು ಹತ್ತು ಹಲವು ಯೋಜನೆಗಳನ್ನು ರೂಪಿಸಿ, ಅವುಗಳನ್ನು ಇಲಾಖೆಯ ಮೂಲಕ ನೀಡಲಾಗುವ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಜಿಲ್ಲಾ ಉಪ ವಿಭಾಗಾಧಿಕಾರಿ ನಂಜುಡೇಗೌಡ ಫಲಾನುಭಾವಿಗಳಿಗೆ ವಿತರಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡಜನರ ಭದ್ರತೆಯನ್ನು ಕಾಯುವ ದಿಸೆಯಲ್ಲಿ ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲವೇತನ, ಮನಸ್ವಿನಿ, ಮೈತ್ರಿ ಹಾಗೂ ಇನ್ನಿತರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತಗೊಳ್ಳದಂತೆ ಸಂಬಂಧಪಟ್ಟ ಇಲಾಖೆಯನ್ನೇ ಪ್ರತಿ ಹೋಬಳಿ ಕೇಂದ್ರದಲ್ಲಿ ತೆರಯಲಾಗಿದೆ. ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಹೋಬಳಿ ಕೇಂದ್ರದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ತಂದುಕೊಡುವ ಮೂಲಕ ಪಡೆದುಕೊಳ್ಳುವಂತೆ ಕರೆ ನೀಡಿದರು.

ವಿವಿಧ ಗ್ರಾಮಗಳಾದ ಕೆದಕಲ್ ಬೋಯಿಕೇರಿ, ಹಟ್ಟಿಹೊಳೆ, ಮಾದಾಪುರ ಹರದೂರು, ಗರಗಂದೂರು, ಸುಂಟಿಕೊಪ್ಪ, ಕಂಬಿಬಾಣೆ, ಕೊಡಗರಹಳ್ಳಿ, ಅತ್ತೂರು-ನಲ್ಲೂರು, ಹೆರೂರು, ನಾಕೂರು-ಶಿರಂಗಾಲ, ಕಾನ್‍ಬೈಲ್, 7ನೇ ಹೊಸಕೋಟೆ, ಗರ್ವಾಲೆ ಮುಂತಾದ ಗ್ರಾಮಗಳ ನೂರಾರು ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ಸಮಾರಂಭದ ವೇದಿಕೆಯಲ್ಲಿ ನಾಡಕಚೇರಿಯ ಕಂದಾಯ ಪರಿವೀಕ್ಷಕ ಕೃಷ್ಣಪ್ಪ, ಗ್ರಾಮಲೆಕ್ಕಿಗರು, ಸಹಾಯಕರು ಫಲಾನುಭವಿಗಳು ಉಪಸ್ಥಿತರಿದ್ದರು.