ಸಿದ್ದಾಪುರ, ಮಾ. 12: ಕೊಡಗು ಜಿಲ್ಲಾ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವತಿಯಿಂದ ತಾ. 13 ರಂದು (ಇಂದು) ಮಡಿಕೇರಿಯಲ್ಲಿ ಹಕ್ಕೋತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಸಿ.ಐ.ಟಿ.ಯು ತೋಟ ಕಾರ್ಮಿಕರ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್ ಹಾಗೂ ಹೆಚ್.ಬಿ. ರಮೇಶ್ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಜಿಲ್ಲೆಯ ಬಹುತೇಕ ಆದಿವಾಸಿಗಳನ್ನು ತೋಟದ ಮಾಲಿಕರು ಸಮರ್ಪಕವಾಗಿ ನೋಡಿಕೊಳ್ಳದೆ, ಕನಿಷ್ಠ ವೇತನವನ್ನು ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾರ್ಮಿಕರಿಗೆ ಸೂಕ್ತ ಭದ್ರತೆ, ಕನಿಷ್ಠ ವೇತನ ನೀಡಬೇಕೆಂದು ಸಂಘಟನೆ ಒತ್ತಾಯಿಸುತ್ತದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಎನ್.ಮಂಜು, ಶ್ರೀಲಿಂಗನ್, ಡಿ.ಡಿ. ರವಿ, ಎ.ಸಿ. ಬಾಬು ಇದ್ದರು.

ಕಾರ್ಮಿಕರ ಬೆಂಬಲ

ಕೊಡಗು ಜಿಲ್ಲೆಯ ಆದಿವಾಸಿಗಳಿಗೆ ನಿವೇಶನ ಹಾಗೂ ಭೂಮಿಯ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆಗೆ ಜಿಲ್ಲಾ ಹಮಾಲಿ ಕಾರ್ಮಿಕರ ಸಂಘ ಬೆಂಬಲ ಸೂಚಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಹಾಗೂ ಕಾರ್ಯದರ್ಶಿ ಹಸನಬ್ಬ, ಆದಿವಾಸಿಗಳು ತಲೆತಲಾಂತರದಿಂದ ಇಲ್ಲೇ ಹುಟ್ಟಿ ಬೆಳೆದಿದ್ದರೂ ವಾಸಿಸಲು ಸೂರಿಲ್ಲ್ಲದೆ ಪರದಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.