ಸಿದ್ದಾಪುರ, ಮಾ. 12: ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಅಧಿಕೃತ ಲಾಂಛನ ಬಿಡುಗಡೆ ಕಾರ್ಯಕ್ರಮ ಸಿದ್ದಾಪುರ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ, ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಜಿಲ್ಲೆಯ ಯುವ ಪ್ರತಿಭೆಗಳಿಗೆ ಪಂದ್ಯಾವಳಿಯಿಂದ ಅವಕಾಶ ದೊರೆಯುತ್ತಿದ್ದು, ಐ.ಪಿ.ಎಲ್ ಮಾದರಿಯಲ್ಲಿ ಆಟಗಾರರ ಬಿಡ್ಡಿಂಗ್ ಹಾಗೂ ಪಂದ್ಯಾವಳಿ ನಡೆಯುತ್ತಿದೆ. 2ನೇ ಆವೃತ್ತಿಯ ಪಂದ್ಯಾವಳಿಯು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಸೋಮವಾರಪೇಟೆ ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೊಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಐ.ಪಿ.ಎಲ್ ಮಾದರಿಯಲ್ಲಿ ವಿನೂತನ ಪ್ರಯತ್ನವನ್ನು ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಮಾಡಿರುವದು ಶ್ಲಾಘನೀಯ. ಕೆ.ಸಿ.ಎಲ್.ನಿಂದ ಯುವ ಪ್ರತಿಭೆಗಳಿಗೆ ವೇದಿಕೆ ನಿರ್ಮಾಣವಾಗಿದೆ ಎಂದರು.

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಎಂ.ಕೆ ಮಣಿ ಮಾತನಾಡಿ, ಕ್ರೀಡೆಯಿಂದ ಪರಸ್ಪರ ಬಾಂದವ್ಯ ವೃದ್ಧಿಯಾಗುತ್ತದೆ. ಕೆ.ಸಿ.ಎಲ್ ಪಂದ್ಯಾವಳಿಯಿಂದ ಹಲವಾರು ಪ್ರತಿಭೆಗೆ ಅವಕಾಶವಾಗಿದೆ ಎಂದರು.

ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ಸೋಮವಾರಪೇಟೆ ತಾ.ಪಂ. ಸದಸ್ಯೆ ಸುಹದಾ ಅಶ್ರಫ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸಲಾಂ, ಆರೆಂಜ್ ಕೌಂಟಿ ಪ್ರಧಾನ ವ್ಯವಸ್ಥಾಪಕಿ ಕಾಂತಿ ಅನೀಶ್, ಸಿದ್ದಾಪುರ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್ ವಾಸು ಲಾಂಛನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಸಿಟಿ ಬಾಯ್ಸ್ ಯುವಕ ಸಂಘದ ಸದಸ್ಯರು, ಕೆ.ಸಿ.ಎಲ್. ಸದಸ್ಯರು ಇದ್ದರು. ರೆಜಿತ್ ಕುಮಾರ್ ಗುಹ್ಯ ಸ್ವಾಗತಿಸಿ, ಎಂ.ಎ. ಅಜೀಜ್ ವಂದಿಸಿದರು.