ಯುಪಿಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಕುಸಿತ

ಲಖನೌ, ಮಾ. 12: ಉತ್ತರ ಪ್ರದೇಶದಲ್ಲಿ ಶೇ. 19 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯೆ ಈ ಬಾರಿ ವಿಧಾನಸಭೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 69ರಿಂದ 24ಕ್ಕೆ ಕುಸಿದಿದೆ. 2012ರ ಚುನಾವಣೆಯಲ್ಲಿ ಒಟ್ಟು 69 ಅಲ್ಪಸಂಖ್ಯಾತ ಶಾಸಕರು ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಕೇವಲ 24 ಶಾಸಕರು ಮಾತ್ರ ವಿಧಾನಸಭೆ ಪ್ರವೇಶಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂರು ನಿರ್ಣಾಯಕ ಮತಗಳನ್ನು ಹೊಂದಿದ್ದರೂ ಈ ಬಾರಿ ಬಿಜೆಪಿ 403 ಸ್ಥಾನಗಳ ಪೈಕಿ ಯಾರೊಬ್ಬರಿಗೆ ಟಿಕೆಟ್ ನೀಡಿರಲಿಲ್ಲ. ಪಶ್ಚಿಮ ಉತ್ತರ ಪ್ರದೇಷ ರೋಹಿಖಾಂಡ್, ತೆರೈ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಮುಸ್ಲಿಮರ, ಯಾದವ್ ಮತ್ತು ದಲಿತರ ಪ್ರಭಾವ ಹೆಚ್ಚಾಗಿದೆ.

ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ

ಜಮ್ಮು, ಮಾ. 12: ಪಾಕಿಸ್ತಾನ ಸೇನೆ ಮತ್ತೆ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಕದನ ವಿರಾಮ ಉಲ್ಲಂಘನೆ ನಡೆದಿದ್ದು, ಭಾರತದ ಕೃಷ್ಣ ಘಟಿ ಸೆಕ್ಟರ್‍ನ್ನು ಗುರಿಯಾಗಿರಿಸಿಕೊಂಡು 82 ಎಂಎಂ ಮಾರ್ಟರ್ ಶೆಲ್‍ಗಳ ಮೂಲಕ ಧಾಳಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಷ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ 12 ಗಂಟೆಯ ವೇಳೆಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಭಾರತೀಯ ಸೇನೆಯ ವಕ್ತಾರರು ಹೇಳಿದ್ದಾರೆ.

ಭಾರೀ ದುರಂತ ತಪ್ಪಿಸಿದ ರೈಲು ಚಾಲಕ

ವಿಜಯಪುರ, ಮಾ. 12: ರೈಲ್ವೆ ಹಳಿಯಲ್ಲಿ ಬಿರುಕು ಕಂಡು ಬಂದ ಹಿನ್ನೆಲೆ ರೈಲು ಚಾಲಕ ರೈಲನ್ನು ನಿಲ್ಲಿಸಿ ಆಗಬಹುದಾಗಿದ್ದ ದೊಡ್ಡ ದುರಂತವೊಂದನ್ನು ತಪ್ಪಿಸಿರುವ ಘಟನೆ ಕರ್ನಾಟಕ ರಾಜ್ಯದ ವಿಜಯಪುರದಲ್ಲಿ ನಡೆದಿದೆ. ಸೊಲ್ಲಾಪುರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಪ್ಯಾಸೆಂಜರ್ ರೈಲಿನ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ರೈಲು ದುರಂತವೊಂದು ತಪ್ಪಿದ್ದು, ರೈಲು ಹಳಿ ಬಿರುಕು ಸರಿಪಡಿಸಿದ ಬಳಿಕ ರೈಲು ಪ್ರಯಾಣ ಮುಂದುವರೆಸಿದೆ. ವಿಜಯಪುರದ ಅಲಿಯಾಬಾದ್ ಬಳಿ ಹಳಿಯಲ್ಲಿ ಬಿರುಕು ಬಿಟ್ಟಿರುವದನ್ನು ಗಮನಿಸಿದ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಅಲ್ಲದೆ ಕೂಡಲೇ ರೈಲ್ವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ರೈಲು ಹಳಿ ಸರಿಪಡಿಸುವಂತೆ ಮಾಹಿತಿ ನೀಡಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ರೈಲ್ವೆ ಇಲಾಖೆ ಸಿಬ್ಬಂದಿ ಹಳಿಯನ್ನು ದುರಸ್ತಿಗೊಳಿಸಿ ರೈಲು ಚಲಿಸಲು ಅನುವು ಮಾಡಿಕೊಟ್ಟರು. ಈ ಘಟನೆಯಿಂದಾ ಈ ಮಾರ್ಗದಲ್ಲಿ 45 ನಿಮಿಷ ತಡವಾಗಿ ರೈಲು ಪ್ರಯಾಣ ಮುಂದುವರೆಯಿತು.

ಪೆರೋಲ್ ಖೈದಿ ಮಗನೊಂದಿಗೆ ಆತ್ಮಹತ್ಯೆಗೆ ಶರಣು

ನೆಲಮಂಗಲ, ಮಾ. 12: ಹತ್ಯೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಪೆರೋಲ್ ಮೇಲೆ ಹೊರಬಂದಿದ್ದ ಖೈದಿಯೋರ್ವ ತನ್ನ ಮಗನೊಂದಿಗೆ ಆತ್ಮಹತ್ಮೆಗೆ ಶರಣಾದ ಘಟನೆ ಬೆಂಗಳೂರು ಹೊರವಲಯ ಬಾಗಲಗುಂಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿ ಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಖೆÉೈದಿಯನ್ನು ಶ್ರೀಧರ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ನಿನ್ನೆ ತನ್ನ 13 ವರ್ಷದ ಮಗ ಶ್ರೀ ವಿಷ್ಣು ಜೊತೆ ನೇಣಿಗೆ ಶರಣಾಗಿದ್ದಾನೆ. ಮೃತ ಶ್ರೀಧರ್ ಕುಮಾರ್ ಶ್ರೀಧರ್ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ಕನ ಗಂಡನನ್ನು ಹತ್ಯೆ ಮಾಡಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದನು. ಪ್ರಕರಣ ಸಂಬಂಧ 14 ವರ್ಷ ಜೈಲು ಶಿಕ್ಷೆಯಾಗಿತ್ತು. ಅದರಲ್ಲಿ 8 ವರ್ಷ ಜೈಲು ಶಿಕ್ಷೆ ಅನುಭವಿಸಿ, ಇತ್ತೀಚೆಗೆ ಪೇರೊಲ್ ಮೇಲೆ ಹೊರಗಡೆಗೆ ಬಂದಿದ್ದ ಎನ್ನಲಾಗಿದೆ.

ಸಾಹಿತಿ ಯೋಗೇಶ್ ಮಾಸ್ಟರ್ ಮುಖಕ್ಕೆ ಮಸಿ

ದಾವಣಗೆರೆ, ಮಾ. 12: ನಗರದಲ್ಲಿ ಭಾನುವಾರ ನಡೆದ ಲಂಕೇಶ್ ಜನ್ಮದಿನ ಕಾರ್ಯಕ್ರಮಕ್ಕೆ ಬಂದಿದ್ದ ಸಾಹಿತಿ ಯೋಗೇಶ್ ಮಾಸ್ಟರ್ ಅವರ ಮುಖಕ್ಕೆ ದುಷ್ಕರ್ಮಿಗಳು ಮಸಿ ಬಳಿದಿರುವ ಘಟನೆ ನಡೆದಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ‘ಲಂಕೇಶ್-82’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಟೀ ಕುಡಿಯಲು ಎಂ.ಸಿ.ಸಿ. ‘ಬಿ’ ಬ್ಲಾಕ್‍ನಲ್ಲಿರುವ ಹೊಟೇಲ್‍ಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಯೋಗೇಶ್ ಅವರ ಮೇಲೆ ಕಪ್ಪು ಬಣ್ಣವನ್ನು ಎರಚಿದ್ದಾರೆ. ಬಳಿಕ ಕನ್ನಡ ಭವನಕ್ಕೆ ಬಂದು ಯೋಗೇಶ್ ವೇದಿಕೆ ಏರಿ ಘಟನೆ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು. ‘ದುಷ್ಕರ್ಮಿಗಳು ನನ್ನ ಚಲನವಲನ ಗಮನಿಸುತ್ತಿದ್ದರು. ಏಕಾಏಕಿ ಬಂದು ಬಣ್ಣ ಎರಚಿದರು. ಅವರು ನನ್ನ ಕಣ್ಣಿಗೆ ಟಾರ್ಗೆಟ್ ಮಾಡಿದ್ದರು. ಬಣ್ಣಕ್ಕೆ ರಾಸಾಯನಿಕವನ್ನು ಮಿಶ್ರಣ ಮಾಡಿದ್ದರಿಂದ ಮೈ ಇನ್ನೂ ಉರಿಯುತ್ತಿದೆ. ಕಣ್ಣು ತೆರೆಯಲು ತುಂಬಾ ಹೊತ್ತು ಕಷ್ಟ ಪಟ್ಟೆ’ ಎಂದು ಹೇಳಿದರು. ಇವರು ಈ ಹಿಂದೆ ಬರೆದ ‘ಡುಂಢಿ’ ಕಾದಂಬರಿ ವಿವಾದಕ್ಕೆ ಒಳಗಾಗಿದ್ದರಿಂದ ನಿಷೇಧಿಸಲಾಗಿತ್ತು.

ಶಿವಕಾಶಿ ಪಟಾಕಿ ಘಟಕ ಸ್ಫೋಟ: 4 ಸಾವು

ವಿರುಧುನಗರ-ತಮಿಳುನಾಡು, ಮಾ. 12: ಸತ್ತೂರು ಜಿಲ್ಲೆಯ ವೆತ್ರಿಲೈರಾಣಿ ಎಂಬ ಗ್ರಾಮದಲ್ಲಿರುವ ಶಿವಕಾಶಿ ಪಟಾಕಿ ತಯಾರಿಕಾ ಘಟಕ ಸ್ಫೋಟಗೊಂಡು ಮೂವರು ಮಹಿಳೆಯರು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರಿಗೆ ಗಾಯಗಳಾಗಿವೆ. ಶಕ್ತಿಷಣ್ಮುಗಂ ಎಂಬವನು ಈ ಪಟಾಕಿ ತಯಾರಿಕಾ ಘಟಕದ ಮಾಲೀಕ. ಇದರಲ್ಲಿ 70 ಮಂದಿ ಕೆಲಸ ಮಾಡುತ್ತಿದ್ದು, ದುರಂತ ನಡೆದ ವೇಳೆ ಕೇವಲ 15 ಮಂದಿ ಮಾತ್ರ ಇದ್ದರು. ದುರಂತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತದಲ್ಲಿ ಮೂರು ಶೆಡ್ಸ್ ಹಾನಿಗೊಳಗಾಗಿವೆ. ಈ ಸಂಬಂಧ ಘಟಕದ ನಿರ್ವಹಣಾಧಿಕಾರಿ ಮಹೇಂದ್ರನ್ ಅವರನ್ನು ಪೆÇಲೀಸರು ಬಂಧಿಸಿದ್ದಾರೆ. ಷಣ್ಮುಗಮ್ ಎಂಬ ಕಾರ್ಮಿಕ ಪಟಾಕಿಗಳನ್ನು ತಯಾರಿಸಲು ಬೇಕಾದ ರಾಸಾಯನಿಕಗಳನ್ನು ಕೊಠಡಿಯಲ್ಲಿ ತಯಾರಿಸುತ್ತಿದ್ದನು. ರಾಸಾಯನಿಕ ಬೆರೆಸುವ ವೇಳೆ ಆದ ಘರ್ಷಣೆಯೇ ಈ ದುರಂತ ಸಂಭವಿಸಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿ ಎ ಶಿವಜ್ಞಾನಮ್ ಅವರೊಂದಿಗೆ ಶಿವಕಾಶಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಕೆ.ಟಿ. ರಾಜೇಂದ್ರನ್ ಮೃತರ ಕುಟುಂಬಕ್ಕೆ ರೂ. 5.50 ಲಕ್ಷ ಪರಿಹಾರ ನೀಡಿದ್ದಾರೆ.

ವಿಷಾಹಾರ ಸೇವನೆ: ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ತುಮಕೂರು, ಮಾ. 12: ತುಮಕೂರಿನ ಚಿಕ್ಕನಾಯಕನಹಳ್ಳಿಯ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ರಮೇಶ್ ಇಂದು ಮೃತಪಟ್ಟಿದ್ದು, ಇದರೊಂದಿಗೆ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ತಾ. 9 ರಂದು ಸಂಭಿಸಿದ್ದ ಈ ದುರಂತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಸೆಕ್ಯುರಿಟಿ ಗಾರ್ಡ್ ರಮೇಶ್ ಹಾಗೂ ಇನ್ನೋರ್ವ ವಿದ್ಯಾರ್ಥಿ ಸುದರ್ಶನ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಸತಿ ಶಾಲೆಯಲ್ಲಿ ಆಹಾರ ಸೇವಿಸಿದ್ದ ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ ಮತ್ತು ಶ್ರೇಯಸ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಮೇಶ್ ಅವರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.