ವೀರಾಜಪೇಟೆ, ಮಾ. 9: ವೀರಾಜಪೇಟೆಯ ಹಿಂದೂ ಅಗ್ನಿದಳದ ವತಿಯಿಂದ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಏಪ್ರಿಲ್ 27 ರಿಂದ 30ರ ವರೆಗೆ ಸ್ಥಳೀಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಸಂಚಾಲಕ ಎನ್.ಪಿ. ದಿನೇಶ್ ನಾಯರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಬಾಂಧವರಿಗೆ ಸೀಮಿತಗೊಂಡಂತೆ ಜಿಲ್ಲೆಯಾದ್ಯಂತ ವಿವಿಧ ತಂಡಗಳು ಭಾಗವಹಿಸಲು ಅವಕಾಶವಿದೆ. ಸಮಾಜ ಸೇವೆಯನ್ನು ಮುಖ್ಯ ಉದ್ದೇಶವಿಟ್ಟುಕೊಂಡಿರುವ ಅಗ್ನಿದಳ ಎರಡು ವರ್ಷಗಳಿಂದ ಹಿಂದೂ ಬಾಂಧವರ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. 2016ನೇ ಸಾಲಿನಲ್ಲಿ ಸರಕಾರಿ ಶಾಲೆಗಳಿಗೆ 2000 ಪಠ್ಯ ಪುಸ್ತಕಗಳನ್ನು ವಿತರಿಸಿದೆ. ಜೊತೆಗೆ 20 ವಿದ್ಯಾರ್ಥಿಗಳಿಗೆ ಶಾಲೆಯ ವಾರ್ಷಿಕ ಶುಲ್ಕವನ್ನು ಪಾವತಿಸಿ ವಿದ್ಯೆಯಲ್ಲಿ ಮುಂದುವರೆ ಯುವಂತೆ ಮಾಡಿದೆ. ರೋಗಗ್ರಸ್ತ 9ಮಂದಿಗೆ ವೈದ್ಯಕೀಯ ವೆಚ್ಚಗಾಗಿ ಸಹಾಯ ಧನವನ್ನು ನೀಡಿ ಸಹಕರಿಸಿದೆ. ಕಡು ಬಡವರಿಗೆ ವಿವಿಧ ರೀತಿಯಲ್ಲಿ ಸಹಾಯ ಹಸ್ತ ನೀಡಲು ಅಗ್ನಿದಳ ವಿವಿಧ ಯೋಜನೆಗಳನ್ನು ಕೈಗೊಳ್ಳಲಿದೆ ಎಂದರು.

ಸಹ ಸಂಚಾಲಕ ಜನಾರ್ಧನ್ ಮಾತನಾಡಿ, ಪಂದ್ಯದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 15 ಸಾವಿರ ಹಾಗೂ ಪಾರಿತೋಷಕ, ದ್ವಿತೀಯ ರೂ. 10 ಸಾವಿರ ಪಾರಿತೋಷಕ ಬಹುಮಾನ ನೀಡಲಾಗುವದು. ಉತ್ತಮ ಬ್ಯಾಟ್ಸ್‍ಮೆನ್, ಉತ್ತಮ ಬೌಲರ್, ಸರಣಿ ಶ್ರೇಷ್ಠ, ಪ್ರಶಸ್ತಿಯನ್ನು ನೀಡಲಾಗುವದು. ಪಂದ್ಯಾಟದಲ್ಲಿ ಹೊರಗಿನ 3 ಜನ ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಬಹು ದಾಗಿದೆ. ಹೆಸರು ನೋಂದಾವಣಿಗೆ ಏಪ್ರಿಲ್ 15 ಕಡೆಯ ದಿನಾಂಕವಾಗಿದೆ. ಆಸಕ್ತರು 9880808560, 8088668880 ಇವರುಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಸಂಸ್ಥೆಯ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ ಮಾತನಾಡಿ, ಈ ಬಾರಿ ಖಾಸಗಿ ಬಸ್ಸ್ ನಿಲ್ದಾಣದಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ಪೊರೈಸಲು ನೀರಿನ ಘಟಕವನ್ನು ಸ್ಥಾಪಿಸಲು ಯೋಜನೆ ಯೊಂದನ್ನು ಕೈಗೊಳ್ಳಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಪದಾಧಿಕಾರಿ ಗಳಾದ ಯೋಗೀಶ್ ನಾಯ್ಡು, ಹರ್ಷವರ್ಧನ್, ಪ್ರಸನ್ನ, ರಂಜಿತ್ ಉಪಸ್ಥಿತರಿದ್ದರು.