ಗೋಣಿಕೊಪ್ಪಲು, ಮಾ. 12: ನೆಹರೂ ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ತಾಲೂಕು ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 5 ದಿನದ ಯುವ ನಾಯಕತ್ವ ಶಿಬಿರದ ಸಮಾರೋಪ ಸಮಾರಂಭ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶ್ರೀಧರ್ ನೆಲ್ಲಿತಾಯ, ಇಂದಿನ ರಾಜಕೀಯ ವ್ಯವಸ್ಥೆ ಕಲುಷಿತಗೊಳ್ಳುತ್ತಿದ್ದು, ಇದಕ್ಕೆ ನಾಯಕತ್ವ ಕೊರತೆಯೇ ಕಾರಣವಾಗಿದೆ. ಯುವ ಜನತೆ ಇಂತಹ ವ್ಯವಸ್ಥೆಯ ವಿರುದ್ಧ ದಿಟ್ಟ ನಡೆ ಪ್ರದರ್ಶಿಸಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಾಜು ಜಾರ್ಜ್ ಮಾತನಾಡಿ, ಶಿಬಿರಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇಲ್ಲಿನ ಅನುಭವಗಳನ್ನು ಮತ್ತು ಕಲಿತ ಪಾಠಗಳನ್ನು ಇತರರಿಗೆ ತಿಳಿಸುವ ಕಾರ್ಯವಾಗಬೇಕು. ಯುವಜನತೆ ಕೃಷಿಯತ್ತ ಒಲವು ತೋರುವಂತಾಗಬೇಕು ಎಂದರು.

ಯುವ ಜನತೆಯಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. 5 ದಿನದ ಶಿಬಿರದಲ್ಲಿ ವಿದ್ಯಾರ್ಥಿಗಳು ಕಲಿತ ವಿಷಯವನ್ನು ಜೀವನದಲ್ಲಿ ರೂಡಿಸಿಕೊಳ್ಳುವಂತೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ ಕರೆ ನೀಡಿದರು.

ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕಂದಾ ದೇವಯ್ಯ ಪ್ರಸ್ತಾವಿಕ ಮಾತನಾಡಿದರು. ಶಿಬಿರದಲ್ಲಿ ಪಾಲ್ಗೊಂಡ 40 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭ ತೆಳ್‍ಂಗ್ ನೀರ್ ಕೊಡವ ಚಿತ್ರದ ಕಾರ್ಯಕಾರಿ ನಿರ್ಮಾಪಕ ಸಂಪತ್, ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್, ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷೆ ಪಂಕಜಾಕ್ಷಿ ಇದ್ದರು.

ಅಂಜುಷಾ ಸ್ವಾಗತಿಸಿ, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ವಂದಿಸಿದರು, ಕಂದಾ ದೇವಯ್ಯ ನಿರೂಪಿಸಿದರು.