ಕೂಡಿಗೆ, ಮಾ. 12: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ, ಕೂಡಿಗೆಯ ಕೃಷಿ ಕ್ಷೇತ್ರದ ಆವಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತೆ ಬಹುದಿನಗಳ ಬೇಡಿಕೆಯಾಗಿದ್ದ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಒಂದು ವರ್ಷ ಕಳೆದಿದೆ. ಶೇ.30ರಷ್ಟು ಕಾಮಗಾರಿ ನಡೆದು ಇದೀಗ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪದಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ದೆಹಲಿಯ ಸಿನ್ಹೋ ಕೋಡ್ ಕಂಪೆನಿಯವರು ಟೆಂಡರ್ ಪಡೆದಿದ್ದಾರೆ. ಟೆಂಡರ್ ಪಡೆದ ಸಂದರ್ಭ ಅಂದಾಜು 4.5 ಕೋಟಿ ರೂ. ಮಂಜೂರಾಗಿದ್ದು, ಇದೀಗ ಅರ್ಧ ಕಾಮಗಾರಿ ನಡೆದರೂ, ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರದಿಂದ ಹಣ ಬಿಡುಗಡೆ ಯಾಗಿಲ್ಲ ಎಂಬ ಕಾರಣದಿಂದ ಕಾಮಗಾರಿ ಅರ್ಧದಲ್ಲೇ ನಿಂತಿದೆ.

ಹಾಕಿ ಟರ್ಫ್‍ಗೆ ಬಂದ ಕೃತಕ ಹುಲ್ಲಿನ ದೊಡ್ಡಮಟ್ಟದ ಟರ್ಫ್ ಶೀಟುಗಳು ಬಿಸಿಲಿನಲ್ಲಿ ಒಣಗಿ ಹಾಳಾಗುವಂತಹ ಪರಿಸ್ಥಿತಿ ಕಂಡುಬರುತ್ತಿದೆ. ಸಂಬಂಧಪಟ್ಟ ರಾಜ್ಯ ಮಟ್ಟದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ತುರ್ತಾಗಿ ಸ್ಪಂಧಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.

- ಕೆ.ಕೆ.ನಾಗರಾಜಶೆಟ್ಟಿ.