ಸೋಮವಾರಪೇಟೆ, ಮಾ. 12: ರಂಗುರಂಗಿನ ಹೋಳಿ ಹಬ್ಬವನ್ನು ಪಟ್ಟಣದಲ್ಲಿ ಯುವ ಜನಾಂಗ ಸೇರಿದಂತೆ ಸಾರ್ವಜನಿಕರು ಸಂಭ್ರಮದಿಂದ ಆಚರಿಸಿದರು.ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯುವಕರು, ಮಕ್ಕಳು, ವೃದ್ಧರಾದಿಯಾಗಿ ಬಣ್ಣ ಬಣ್ಣದ ಓಕುಳಿಯನ್ನು ಪರಸ್ಪರ ಎರಚಿ ಹಬ್ಬವನ್ನು ಸಂಭ್ರಮಿಸಿದರು. ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು ಬಣ್ಣದ ಪುಡಿಯನ್ನು ಎರಚಿ ಸಂತೋಷಪಟ್ಟರೆ, ಯುವಕರು ರಸ್ತೆಗಳಲ್ಲಿ ತೆರಳಿ ಓಕುಳಿ ಎರಚಿ ಸಂಭ್ರಮಿಸಿದರು. ರಾಜಸ್ಥಾನ ಮೂಲದವರು ಹೋಳಿ ಹಬ್ಬವನ್ನು ಅತೀ ಹೆಚ್ಚು ಸಂಭ್ರಮದಿಂದ ಆಚರಿಸಿ, ಮನೆಯಲ್ಲಿ ನಾನಾ ತರಹದ ಅಡುಗೆ ತಯಾರಿಸಿ, ಸಾಮೂಹಿಕ ಭೋಜನದೊಂದಿಗೆ ಸಂಭ್ರಮಿಸಿದರು.

ಆಲೂರುಸಿದ್ದಾಪುರ: ಹೋಳಿ ಹಬ್ಬದ ಮುನ್ನಾ ದಿನವೆ ಶನಿವಾರ ಸಂತೆ ಮಧ್ಯೆ ಪೇಟೆಯ ಮಕ್ಕಳು ಅಂಗಡಿ ಮುಂಗಟ್ಟುಗಳಿಗೆ ಹೋಗಿ ಜನರಿಗೆ ಹೋಳಿ ಹಬ್ಬದ ಶುಭಾಶಯ ಹೇಳಿ ಬಣ್ಣ ಬಳಿದರು. ನಂತರ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹೋಳಿ ಓಕುಳಿಯಾಟವಾಡಿದರು.