ಮಡಿಕೇರಿ, ಮಾ. 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‍ಡಿಎ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸರಕು ಮತ್ತು ಸೇವಾ ಸುಂಕ ಕಾನೂನು ಸಮಗ್ರ ಭಾರತದ ಏಕತೆಗೆ ಒತ್ತು ನೀಡುವ ಉದ್ದೇಶದಿಂದಲೇ ಕೂಡಿದೆ.

ಈ ಅಂಶವನ್ನು ಕೇಂದ್ರ ಸರಕು ಮತ್ತು ಸೇವಾ ಸುಂಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಈ ಸಂಬಂಧ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಈಚೆಗೆ ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.

ಅವರುಗಳ ಪ್ರಕಾರ ಭಾರತ ಸರಕಾರ ಯಾರೊಬ್ಬರಿಗೂ ಯೋಜನೆಯಡಿ ತೊಂದರೆ ಕೊಡದು, ಬದಲಾಗಿ ವಾರ್ಷಿಕ ರೂಪಾಯಿ 20 ಲಕ್ಷ ಮೇಲ್ಪಟ್ಟು ಆದಾಯ ಗಳಿಸುವವರು ಮಾತ್ರ ಸರಕಾರ ನಿಗದಿಗೊಳಿಸುವ ಕನಿಷ್ಟ ಸೇವಾ ಶುಲ್ಕ ಪಾವತಿಸಬೇಕು. ಅದು ರಾಜ್ಯ ಅಥವಾ ಕೇಂದ್ರ ಸಂಗ್ರಹಿಸುವ ಯಾವದಾದರೂ ಒಂದೆಡೆ ಪಾವತಿಸಿದರೆ ಮಾತ್ರ ಸಾಕು. ಪ್ರತ್ಯೇಕ ತೆರಿಗೆ ಪದ್ಧತಿ ಮುಂದೆ ಇರಲಾರದು.

ಜುಲೈ 1ರಿಂದ ಈ ಕಾನೂನು ಜಾರಿಗೊಂಡರೂ ಕೂಡ ಮುಂದಿನ ಹಣಕಾಸು ವರ್ಷ ಆರಂಭ ತನಕ ವ್ಯಾಪಾರೋದ್ಯಮಿಗಳಿಗೆ ತಮ್ಮ ತಮ್ಮ ಸೇವಾ ಶುಲ್ಕ ಪಾವತಿಸಲು ಕಾಲಾವಕಾಶ ಲಭ್ಯವಿರಲಿದೆ. ಆ ತನಕ ತಮ್ಮ ವಾರ್ಷಿಕ ವಹಿವಾಟಿನಲ್ಲಿ ಒಟ್ಟಾರೆ ಆದಾಯವು ಜಿಎಸ್‍ಟಿ ವ್ಯವಸ್ಥೆಗೆ ಒಳಪಡುವದೇ ಎಂಬ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪೂರ್ಣ ವಿವರ ಪಡೆದುಕೊಳ್ಳಲು ಅವಕಾಶವಿರಲಿದೆ. ದೇಶದ ಪ್ರಜೆಯಾಗಿ ಅಥವಾ ಉದ್ಯಮಿಗಳಾಗಿ ಸರಕಾರಕ್ಕೆ ತೆರಿಗೆ ವಂಚಿಸದಂತೆ ನಡೆದುಕೊಳ್ಳುವದು ಮುಖ್ಯ ಎನ್ನುವ ಅಧಿಕಾರಿಗಳು ತಮ್ಮ ತಮ್ಮ ಆದಾಯ ಪ್ರಮಾಣವನ್ನು ತಾವಾಗಿ ಪ್ರಕಟಿಸಿ, ತೆರಿಗೆ ಮೊತ್ತ ಪಾವತಿಸಬೇಕೆಂಬದು ಸರಕಾರದ ಆಶಯ ಎಂಬದಾಗಿ ಅಬಿಪ್ರಾಯ ವ್ಯಕ್ತಪಡಿಸಿದ್ದಾರೆ.