ವೀರಾಜಪೇಟೆ, ಮಾ. 13: ಕಕ್ಕಬ್ಬೆಯಿಂದ ವೀರಾಜಪೇಟೆ ಮಾರ್ಗವಾಗಿ ಚೆಂಬೆಬೆಳ್ಳೂರು ಗ್ರಾಮಕ್ಕೆ ತೆರಳುತ್ತಿದ್ದ ಪಿಕ್‍ಅಪ್ ಜೀಪು ಇಲ್ಲಿನ ಕಾವೇರಿ ಶಾಲೆಯ ಬಳಿ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮವಾಗಿ 22 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಿದ್ದು, ಮಂಗಳೂರಿಗೆ ಸಾಗಿಸಲಾಗಿದೆ. ಇತರ 16 ಮಂದಿ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಅಸ್ಸಾಂ ರಾಜ್ಯದಿಂದ ಕಳೆದ 10 ತಿಂಗಳ ಹಿಂದೆ ಉದ್ಯೋಗಕ್ಕಾಗಿ ಬಂದಿದ್ದ ಕಾರ್ಮಿಕರ ತಂಡ ಕಾಫಿ ತೋಟದ ಕೆಲಸ, ಗಾರೆ ಹಾಗೂ ಹೆಲ್ಪರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಚೆಂಬೆಬೆಳ್ಳೂರು ಕಾಫಿ ತೋಟದ ಮಾಲೀಕ ಮೋಹನ್ ಎಂಬವರಿಗೆ ಕಕ್ಕಬ್ಬೆಯಲ್ಲಿಯೂ ಕಾಫಿ ತೋಟವಿದ್ದು ಅಲ್ಲಿಯೂ ಇದೇ ತಂಡ ಕಾಫಿ ಕೊಯ್ಲು ಕೆಲಸ ಮಾಡುತ್ತಿದ್ದು ಎಂದಿನಂತೆ ಬೆಳಿಗ್ಗೆ ಕಕ್ಕಬ್ಬೆಗೆ ತೆರಳಿ ಸಂಜೆ ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ.ಪಿಕ್‍ಅಪ್ ಜೀಪು (ನಂ ಕೆ.ಎ.12ಬಿ 2767) ಅಪರಾಹ್ನ 4-30ಗಂಟೆಗೆ ಕಕ್ಕಬ್ಬೆಯಿಂದ ಹೊರಟು ಕಾವೇರಿ ಶಾಲೆಯ ಬಳಿ ಸುಮಾರು ಸಂಜೆ 5-30 ಗಂಟೆಗೆ ತಲುಪಿ ಅಪಘಾತಕ್ಕೀಡಾಗಿದೆ. ಚಾಲಕ ಬೋಪಣ್ಣ ಎಂಬಾತನು ತಲೆ ಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.

ವೀರಾಜಪೇಟೆ ತುರ್ತು ನಿಗಾ ಘಟಕದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರ ನೇತೃತ್ವದಲ್ಲಿ ಡಾ.ಗಣರಾಜ್ ಭಟ್, ಡಾ. ಪಲ್ಲವಿ, ಡಾ:ರವೀಂದ್ರನಾಥ್ ಹಾಗೂ ಡಾ. ಶ್ರೀನಿವಾಸ ಇವರುಗಳ ತಂಡ ತುರ್ತು ಚಿಕಿತ್ಸೆ ನೀಡಿ ಗಾಯಾಳುಗಳನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಮಡಿಕೇರಿಗೆ ಕಳುಹಿಸಿದರು.

ಗಂಭೀರ ಸ್ವರೂಪದ ಗಾಯಗೊಂಡವರು ಸೇರಿದಂತೆ ಮಹಿಳೆಯರು, ಪುರುಷರ ಕಿರುಚಾಟ ಚೀರಾಟ ಅಲ್ಲಿ ನೆರೆದಿದ್ದವರ ಮನ ಕಲಕುವಂತಿತ್ತು.

ಸಾರ್ವಜನಿಕ ಆಸ್ಪತ್ರೆಗೆ ವಾಹನ ಅಪಘಾತದಿಂದ ಅಸ್ಸಾಂ ಕಾರ್ಮಿಕರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂಬ ಸುದ್ದಿ ಕೇಳುತ್ತಲೆ ಜಯ ಕರ್ನಾಟಕ ಸಂಘಟನೆಯ ಮಂಡೇಟಿರ ಅನಿಲ್ ಅಯ್ಯಪ್ಪ ಹಾಗೂ ಇತರ ಕಾರ್ಯಕರ್ತರು, ಸರ್ವಜನಾಂಗ ಸಂಘಟನೆ ಅಧ್ಯಕ್ಷ ಪಿ.ಎ.ಮಂಜುನಾಥ್ ಇತರ ಸದಸ್ಯರುಗಳು ಇಲ್ಲಿನ ಪ.ಪಂ.

(ಮೊದಲ ಪುಟದಿಂದ) ಅಧ್ಯಕ್ಷ ಕೂತಂಡ ಸಚಿನ್‍ಕುಟ್ಟಯ್ಯ ಹಿರಿಯ ಸದಸ್ಯ ಇ.ಸಿ.ಜೀವನ್, ನಾಮಕರಣ ಸದಸ್ಯ ಮಹಮ್ಮದ್ ರಾಫಿ, ಇಸ್ರಾದ್ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರು ಗಾಯಾಳುಗಳನ್ನು ಆ್ಯಂಬುಲೆನ್ಸ್‍ನಲ್ಲಿ ಸಾಗಿಸಲು ನೆರವಾದರು.

ಗಾಯಗೊಂಡವರ ವಿವರ : ಮುಸ್ಲುದ್ದೀನ್ (35), ಓಸ್ವಾರಿ (30) ಉಕ್ಕ್ಕಿಯ್ಯ (25) ಬೆಹರಾನ್ (30) (ಒಂದೇ ಹೆಸರಿನ ಇಬ್ಬರು) ರೋಸನಾರ್ (20)

ಸುಂತಾನ್, (25) ಎಲೀಮಿನ (20) ಷರ್ಪುದ್ದೀನ್ (25) ರಹೀಂ ಅಬ್ದುಲ್ಲಾ (45) ಸೂಫಿಯ (35) ಸುಲೈಮಾನ್ (30), ಬಹಾನುತ್ತಮ್ (25) ಸಾಯ್‍ರೂಮ್ (22) ನಜೀಮಾ (21) ಮಿನಾರ್‍ಬೇಗಂ (28) ಸೇರಿದಂತೆ ಒಟ್ಟು 22 ಮಂದಿ ಗಾಯಾಳುಗಳ ಪೈಕಿ 13 ಮಂದಿ ಮಹಿಳೆಯರು ಹಾಗೂ 9 ಮಂದಿ ಪುರುಷರು ಎಂದು ವೈದ್ಯರ ತಂಡ ತಿಳಿಸಿದೆ. ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಸಹಾಯಕ ಶಿವಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಮಡಿಕೇರಿಗೆ ಸರದಿಯಲ್ಲಿ ಬಂದ ಆ್ಯಂಬುಲೆನ್ಸ್‍ಗಳು

ವೀರಾಜಪೇಟೆಯಲ್ಲಿ ತುರ್ತು ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ 19 ಮಂದಿ ಗಾಯಾಳುಗಳನ್ನು 9 ಆ್ಯಂಬುಲೆನ್ಸ್ ಹಾಗೂ ಬಾಡಿಗೆ ವಾಹನಗಳಲ್ಲಿ ಸರದಿಯಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು. ದೂರದ ಅಸ್ಸಾಂನಿಂದ ಕೊಡಗಿಗೆ ಬಂದು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದ ತೋಟ ಕಾರ್ಮಿಕರು ಅನಾಥರಂತೆ ಕಂಡು ಬಂದರೂ, ನಗರದ ಯುವಪಡೆ ಎಲ್ಲಾ ರೀತಿ ನೆರವು ನೀಡಲು ಧಾವಿಸಿತ್ತು. ನಗರಸಭಾ ಸದಸ್ಯ ಮನ್ಸೂರ್ ಹಾಗೂ ಇತರ ಸಂಘಟನೆಗಳ ಯುವಕರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ನೆರವು ನೀಡುವದರೊಂದಿಗೆ ಗಾಯಾಳುಗಳ ಶುಶ್ರೂಷೆಗೆ ಅಗತ್ಯವಾದ ಆರ್ಥಿಕ ನೆರವು ಸಂಗ್ರಹಿಸಿದರು.

ತೀವ್ರವಾಗಿ ಗಾಯಗೊಂಡ ಒಬ್ಬ ಅಂಗವಿಕಲ ಕಾರ್ಮಿಕ ಹಾಗೂ ಇಬ್ಬರು ಯುವತಿಯರನ್ನು ರಾತ್ರಿ ಆ್ಯಂಬುಲೆನ್ಸ್ ಮೂಲಕ ಮಂಗಳೂರಿಗೆ ಸಾಗಿಸ ಲಾಯಿತು. ಈ ಸಂದರ್ಭದಲ್ಲಿಯು ಸಾರ್ವಜನಿಕರು ಅಭಯ ಹಸ್ತ ಚಾಚಿ ಮಾನವೀಯತೆ ಮೆರೆದರು.

-ಡಿ.ಎಂ.ಆರ್.