ಮಡಿಕೇರಿ, ಮಾ. 13: ಒಂದು ರಸ್ತೆ ನಿರ್ಮಿಸಿದರೆ ಅದು ಒಂದು ವರ್ಷ ಉಳಿಕೆ ಬರುವದೇ ಕಷ್ಟ. ಒಂದು ಮಳೆ-ಗಾಳಿಗೆ ಹೊಂಡಾಗುಂಡಿಯಾಗಿರುತ್ತದೆ. ಅಂತಹದ್ದರಲ್ಲಿ ಹತ್ತು ವರ್ಷಗಳ ಹಿಂದೆ ನಿರ್ಮಿಸಿ ನಂತರದದಲ್ಲಿ ಒಂದು ಸಣ್ಣ ಗುಂಡಿ ಮುಚ್ಚಿದ ಕಾಮಗಾರಿ ಮಾಡದೇ ಇರುವ ರಸ್ತೆಯ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ ನೋಡಿ. ಆ ರೀತಿಯ ಒಂದು ರಸ್ತೆ ದೇವಸ್ತೂರಿನಲ್ಲಿ ಕಾಣಸಿಗುತ್ತದೆ. ಜೊತೆಗೊಂದು ತೀರಾ ಕಿತ್ತು ಹೋಗಿರುವ ಸೇತುವೆ...ಮಡಿಕೇರಿಯಿಂದ 9 ಕಿ.ಮೀ ದೂರದಲ್ಲಿದೆ ದೇವಸ್ತೂರು ಎಂಬ ಮಡಿಕೇರಿಯಿಂದ 9 ಕಿ.ಮೀ ದೂರದಲ್ಲಿದೆ ದೇವಸ್ತೂರು ಎಂಬ ಗ್ರಾಮ. ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಈ ಗ್ರಾಮದಿಂದ ನೆರೆಯ ಮಕ್ಕಂದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ. ಹತ್ತು ವರ್ಷಗಳ ಹಿಂದೆ ನಬಾರ್ಡ್‍ನ ಅನುದಾನದಲ್ಲಿ ರೂ.2 ಕೋಟಿ ವೆಚ್ಚದಲ್ಲಿ 10 ಕಿ. ಮೀ. ರಸ್ತೆಯನ್ನು ನಿರ್ಮಿಸಲಾಗಿದೆ. ನಂತರದಲ್ಲಿ ಇದುವರೆಗೆ ರಸ್ತೆ ದುರಸ್ತಿ ಭಾಗ್ಯ ಕೂಡ ಡಾಮರು ಕಿತ್ತು ಹೋಗಿದ್ದು

(ಮೊದಲ ಪುಟದಿಂದ) ಇದೀಗ ರಸ್ತೆ ಅಳವಡಿಸಿದ್ದ ಜಲ್ಲಿಕಲ್ಲುಗಳೆಲ್ಲ ಮೇಲೆದ್ದು ಬಂದು ದೊಡ್ಡ ದೊಡ್ಡ ಹೊಂಡಗಳಾಗಿವೆ. ಇಳಿಜಾರು ಪ್ರದೇಶಗಳಲ್ಲಂತೂ ಜಲ್ಲಿ ಕಲ್ಲುಗಳೊಂದಿಗೆ ಮಣ್ಣು ಕೂಡ ಕಿತ್ತುಬಂದು ಹೊಂಡಗಳಾಗಿದ್ದು, ನಡೆದಾಡಲೂ ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೀಪು ಹೊರತುಪಡಿಸಿದರೆ ಇತರ ವಾಹನಗಳ ಸಂಚಾರ ಕಷ್ಟಸಾಧ್ಯ.

ಮಕ್ಕಂದೂರಿನಲ್ಲಿ ನಿರ್ವಹಣೆ

ರಸ್ತೆಯ ಅರ್ಧ ಭಾಗ ಮಕ್ಕಂದೂರು ಗ್ರಾ.ಪಂ.ಗೆ ಒಳಪಡಲಿದೆ. ಮಕ್ಕಂದೂರಿಗೆ ಒಳಪಡುವಲ್ಲಿ ರಸ್ತೆ ದುರಸ್ತಿಯೊಂದಿಗೆ, ಅಲ್ಲಲ್ಲಿ ಅವಶ್ಯವಿರುವೆಡೆ ಕಾಂಕ್ರೀಟ್ ರಸ್ತೆ ಕೂಡ ಮಾಡಲಾಗಿದೆ. ಆದರೆ ದೇವಸ್ತೂರು ವಿಭಾಗದಲ್ಲಿ ಒಂದು ಜಲ್ಲಿಕಲ್ಲು ಕೂಡ ಹಾಕಿಲ್ಲ.

ಸೇತುವೆ ತೂತು...!: ದೇವಸ್ತೂರು ಹಾಗೂ ಮಕ್ಕಂದೂರು ಗ್ರಾಮಕ್ಕೆ ಸಂಪರ್ಕ ಕೊಂಡಿಯಂತಿರುವ ಅಬ್ಬಿಧಾರೆಯಲ್ಲಿ ನಿರ್ಮಿಸಲಾಗಿರುವ ತೂಗು ಸೇತುವೆ ತೂತು ಬಿದ್ದಿದೆ. ನಡೆದಾಡಲು ಅಳವಡಿಸಲಾಗಿರುವ ಸಿಮೆಂಟ್ ಹಾಸುಗಳು ಕಿತ್ತು ಹೋಗಿವೆ. ಬಣ್ಣ, ಗ್ರೀಸ್ ಕಾಣದೆ ಸರಳುಗಳು ತುಕ್ಕು ಹಿಡಿದಿವೆ. ಈ ಹಿಂದೆ ಕುಂಬಗೌಡನ ಮಧು ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷರಾಗಿದ್ದ ಸಂದರ್ಭ ಒಮ್ಮೆ ಬಣ್ಣ ಬಳಿಯಲಾಗಿತ್ತು. 2002ರಲ್ಲಿ ನಿರ್ಮಿಸಲಾದ ಇದೀಗ ನಿರ್ವಹಣೆಯಿಲ್ಲದೆ ವಿನಾಶದತ್ತ ಸಾಗುತ್ತಿದೆ. ಸೇತುವೆ ರಸ್ತೆಗೆ ಹೊಂದಿಕೊಂಡಂತೆ ಇರುವದರಿಂದ ತರುಣರು ಸೇತುವೆ ಮೇಲೆ ಬೈಕ್‍ನಲ್ಲಿ ಚಲಿಸುವದಲ್ಲದೆ ‘ವ್ಹೀಲಿಂಗ್’ ಮಾಡುವದರಿಂದ ಸೇತುವೆಗೆ ಹಾನಿಯಾಗುತ್ತಿದೆ. ಇಲ್ಲಿ ಅಪಾಯ ಕಾದಿಟ್ಟ ಬುತ್ತಿಯಂತಿದ್ದು, ಶಾಲಾ ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಸೇತುವೆಯ ಉಭಯ ಕಡೆಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದರೆ ‘ಬೈಕ್ ಹಾವಳಿ’ಗೆ ಕಡಿವಾಣ ಹಾಕುವದಲ್ಲಿದೆ ಸೇತುವೆಯ ರಕ್ಷಣೆಯೂ ಆಗಲಿದೆ.

ಗ್ರಾಮಸ್ಥರಿಂದ ದುರಸ್ತಿ: ರಸ್ತೆ ದುರಸ್ತಿಗೆ ಸಂಬಂಧಿಸಿದವರ ಗಮನಕ್ಕೆ ಅದೆಷ್ಟೋ ಬಾರಿ ತಂದರೂ ಯಾವದೇ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಇದೀಗ ಗ್ರಾಮಸ್ಥರೇ ದೊಡ್ಡ ದೊಡ್ಡ ಹೊಂಡಗಳನ್ನು ಮುಚ್ಚಿದ್ದಾರೆ. ಅಲ್ಲಿನ ನಿವಾಸಿ ಕವನ್ ಅವರ ಮುಂದಾಳತ್ವದಲ್ಲಿ ಜೆಸಿಬಿ ತರಿಸಿ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ. ಆದರೆ ಮಳೆಗಾಲದಲ್ಲಿ ಹಾಕಿದ ಮಣ್ಣು ಕೊಚ್ಚಿಹೋಗಲಿದ್ದು, ಮತ್ತೆ ಕೆಸರಿನ ಗುಂಡಿಗಳಾಗುವದಂತೂ ದಿಟ.

2 ತಿಂಗಳ ಗಡುವು

ರಸ್ತೆ ದುಸ್ಥಿತಿಯ ಬಗ್ಗೆ ಮಾಧ್ಯಮದವರನ್ನು ಸ್ಥಳಕ್ಕೆ ಕರೆದೊಯ್ದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ರಸ್ತೆ ಸರಿಪಡಿಸಿಕೊಡುವಂತೆ ಜಿ.ಪಂ. ಅಧ್ಯಕ್ಷರು, ಸದಸ್ಯರು, ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರ ಗಮನಕ್ಕೆ ತಂದರೂ ಯಾವದೇ ಸ್ಪಂದನವಿಲ್ಲ. ಗ್ರಾಮಸಭೆಯಲ್ಲೂ ಕೂಡ ಪ್ರಸ್ತಾಪಿಸಿದರೂ ಯಾರೂ ಕಾಳಜಿ ವಹಿಸುತ್ತಿಲ್ಲ. ಮಳೆಗಾಲಕ್ಕೂ ಮುನ್ನ ರಸ್ತೆ ದುರಸ್ತಿಯಾಗಬೇಕು. ಮುಂದಿನ ಎರಡು ತಿಂಗಳಲ್ಲಿ ಸರಿಪಡಿಸಿಕೊಡುವಂತೆ ಒತ್ತಾಯಿಸಿದರು.

ಜೀಪುಗಳಿಗೆ ಮಾತ್ರ ಸಂಚರಿಸಲು ಸಾಧÀ್ಯವಾಗುತ್ತದೆ. ಬಾಡಿಗೆ ಮಾಡಿಕೊಂಡರೆ ಒಂದು ಸಾವಿರದವರೆಗೆ ಬಾಡಿಗೆ ನೀಡಬೇಕಾಗುತ್ತದೆ. ತೀರಾ ಸಂಕಷ್ಟ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರಾದ ಕೊಚ್ಚೇರ ಕವನ್, ಸೋಮೆಟ್ಟಿ ಕೆಂಚಪ್ಪ ಗಣಪತಿ, ಐಮುಡಿಯಂಡ ಅಪ್ಪಣ್ಣ, ಕೊಚ್ಚೇರ ಮುದ್ದಯ್ಯ, ನಾಣಿಯಪ್ಪ, ಮೋಟಯ್ಯ, ಪರಿಯಪಮ್ಮನ ಮುತ್ತಣ್ಣ, ಇನ್ನಿತರರು ಅಳಲು ತೋಡಿಕೊಂಡರು.

ಅಬ್ಬಿಧಾರೆ ಬಳಿ ವಾಹನ ಓಡಾಟಕ್ಕೆ ಸೇತುವೆ ನಿರ್ಮಿಸಿದರೆ ಭಾರೀ ಅನುಕೂಲವಾಗಲಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವದಾಗಿ ಹೇಳಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. -ಕುಡೆಕಲ್ ಸಂತೋಷ್.