ವೀರಾಜಪೇಟೆ, ಮಾ. 13: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಮಲೆ ಮಹಾದೇಶ್ವರ ಉತ್ಸವವು ತಾ:15ರಿಂದ20ರವರೆಗೆ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂವಯ್ಯ ಅವರು ಸುಮಾರು ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ ಮಲೆ ಮಹಾದೇವರ ದೇವಸ್ಥಾನದಲ್ಲಿ ಭಕ್ತ ದಾನಿಗಳ ಸಹಾಯದಿಂದ ಸುಮಾರು ರೂ. 50 ಲಕ್ಷ ವೆಚ್ಚದಲ್ಲಿ ಎಲ್ಲ ಸೌಲಭ್ಯಗಳಿಂದ ಕೂಡಿದ ವ್ಯವಸ್ಥಿತ ಭೋಜನಾ ಭವನ, ದೇವಾಲಯಕ್ಕೆ ತೆರಳಲು ಆಯ್ದ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಸೌಲಭ್ಯ ಒದಗಿಸಲಾಗಿದೆ. ಆಡಳಿತ ಮಂಡಳಿ ಭಕ್ತಾದಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ದೇವಾಲಯದ ಅಭಿವೃದ್ಧಿಗಾಗಿ ಇನ್ನು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ದೇವಸ್ಥಾನದಲ್ಲಿ ಭೋಜನಾಲಯದ ನಿರ್ಮಾಣದಿಂದಾಗಿ ಮದುವೆ, ನಾಮಕರಣ, ನಿಶ್ಚಿತಾರ್ಥ ಇತರ ಶುಭ ಸಮಾರಂಭಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ ಎಂದರು.

ಸಮಿತಿಯ ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್ ಮಾತನಾಡಿ ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು ಹಾಗೂ ಕುಕ್ಲೂರು ಗ್ರಾಮಗಳ ವ್ಯಾಪ್ತಿಗೆ ಬರುವ ಮಲೆ ಮಹಾದೇಶ್ವರ ಉತ್ಸವ ತಾ. 15 ರಂದು ಅಪರಾಹ್ನ 4 ಗಂಟೆಗೆ ಕುಂದಿರ ಮನೆಯಿಂದ ಭಂಡಾರ ತಂದು ರಾತ್ರಿ 7.30 ಗಂಟೆಗೆ ಕೊಡಿಮರ ನಿಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಗುವದು. ತಾ. 16 ರಂದು ಅಪರಾಹ್ನ ವiಹಾಪೂಜಾ ಸೇವೆ, ರಾತ್ರಿ ಕಾಪು, ವಿಶೇಷ ಪೂಜಾ ಸೇವೆ, ತಾ: 17 ರಂದು ಬೆಳಿಗ್ಗೆ ಇರುಬೊಳಕು ಮಹಾ ಪೂಜಾ ಸೇವೆ, ತಾ. 18 ರಂದು ಬೆಳಿಗ್ಗೆ 5.30 ಗಂಟೆಗೆ ಇರುಬೊಳಕು, ಮಧ್ಯಾಹ್ನ 12 ಗಂಟೆಗೆ ನೆರ್ಪು ಎತ್ತು ಪೋರಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, 3ಗಂಟೆಗೆ ದೇವರ ದರ್ಶನ, 4 ಗಂಟೆಗೆ ವಸಂತ ಪೂಜೆ, ಸಂಜೆ 6 ಗಂಟೆಗೆ ವೀರಾಜಪೇಟೆಯ ಮುಖ್ಯ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದರು.

ತಾ. 19 ರಂದು ದೇವರ ಅಮೃತ ಸ್ನಾನ, ದೇವರ ನೃತ್ಯ ಹಾಗೂ ತಾ. 20 ರಂದು ಶುದ್ಧ ಕಲಶ, ಮಹಾ ಪೂಜಾ ಸೇವೆ ಜರುಗಲಿದೆ ಉತ್ಸವ ಎಲ್ಲ ದಿನಗಳಲ್ಲು ಅನ್ನ ಸಂತರ್ಪಣೆ ಕಾರ್ಯಕ್ರಮವಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ದೇವತಕ್ಕರಾದ ಕೊಳುವಂಡ ಪೊನ್ನಣ್ಣ, ಖಜಾಂಚಿ ಚೋಕಂಡ ರಮೇಶ್ ಸಮಿತಿ ಸದಸ್ಯರಾದ ಕುಂಡ್ರಂಡ ಬೋಪಣ್ಣ ಉಪಸ್ಥಿತರಿದ್ದರು.