ಕೂಡಿಗೆ, ಮಾ. 13: ಸಮೀಪದ ಶಿರಂಗಾಲದ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ಅರ್ಚಕ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ನೆರವೇರಿದವು.

ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ರಥದಲ್ಲಿ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ಮಧ್ಯಾಹ್ನ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ರಥದ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಡೊಳ್ಳುಕುಣಿತ, ಕೀಲುಕುದುರೆ, ಪೂಜಾಕುಣಿತ, ವೀರಗಾಸೆ ವಿವಿಧ ಕಲಾತಂಡಗಳ ಮೆರಗು ಕಂಡುಬಂದಿತು. ಈ ಸಂದರ್ಭ ಗ್ರಾಮಸ್ಥರು ಮನೆ ಮುಂಭಾಗಕ್ಕೆ ನೀರು ಹಾಕಿ ರಂಗೋಲಿ ಹಚ್ಚಿ ರಥವನ್ನು ಬರಮಾಡಿಕೊಂಡರು.

ರಥೋತ್ಸವದ ಪ್ರಯುಕ್ತ ಗ್ರಾಮದ ಮನೆಗಳ ಹಾಗೂ ಬೀದಿಗಳಲ್ಲಿ ತಳಿರು ತೋರಣಗಳು ರಾರಾಜಿಸುತ್ತಿದ್ದವು.

ಗ್ರಾಮದಲ್ಲಿ ಮೂರು ರಸ್ತೆಗಳು ಕೂಡುವ ಮಧ್ಯದಲ್ಲಿ ರಥದ ಮುಂದೆ ಕರ್ಪೂರದಿಂದ ಓಂಕಾರವನ್ನು ರಚಿಸಿ ಬೆಂಕಿ ಹಚ್ಚಿದ ಭಕ್ತರು ಭಕ್ತಿಭಾವ ಮೆರೆದರು.

ಗ್ರಾಮದಲ್ಲಿ ಪ್ರದಕ್ಷಿಣೆ ನಡೆಸಿದ ಬಳಿಕ ರಥವನ್ನು ಸ್ವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಸಮಿತಿಯ ಪ್ರಮುಖರು, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.