ಶ್ರೀಮಂಗಲ, ಮಾ. 13: ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಅಂಚಿನ 55 ಗ್ರಾಮಗಳನ್ನು ಸೂಕ್ಷ್ಮ ಪರಿಸರ ತಾಣ ಯೋಜನೆಗೆ ಸೇರ್ಪಡೆಗೊಳಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಈ ಯೋಜನೆಯ ವಿರುದ್ಧ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲು ಟಿ.ಶೆಟ್ಟಿಗೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಟಿ.ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ನಾಗರೀಕರು ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ಸಂದರ್ಭ, ಟಿ.ಶೆಟ್ಟಿಗೇರಿ ಬಿ.ಜೆ.ಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ ಅವರು ಮಾತನಾಡಿ ಕೃಷಿ ಹಾಗೂ ತೋಟಗಾರಿಕೆಯನ್ನೇ ಅವಲಂಭಿಸಿ ಬದುಕುತ್ತಿರುವ ಈ ಭಾಗದ ಜನರಿಗೆ ಯೋಜನೆಯಿಂದ ತೀವ್ರ ತೊಂದರೆಯಾಗಲಿದೆ. ಸ್ಥಳೀಯವಾಗಿ ಹೋರಾಟ ಮಾಡಿದರೆ ಸರಕಾರ ಗಮನಿಸುವದಿಲ್ಲ. ಆದ್ದರಿಂದ ಸಂಸದರು,

(ಮೊದಲ ಪುಟದಿಂದ) ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಒಂದಾಗಿ ಜಿಲ್ಲೆಯಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಬೇಕು. ಸೂಕ್ಷ್ಮ ಪರಿಸರ ತಾಣ ಯೋಜನೆಗೆ ಬಾಧಿತವಾಗುವ ಜಿಲ್ಲೆಗಳು ಒಂದೇ ದಿನ ಬಂದ್ ನಡೆಸಿ ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಬೇಕೆಂದು ಹೇಳಿದರು.

ವೀರಾಜಪೇಟೆ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿ ದೇಶದ 126 ಕೋಟಿ ಜನರಲ್ಲಿ ಕೆಲವೊಂದು ಜನರಿಗೆ ಸೀಮಿತವಾಗಿ ಅವರ ಹಕ್ಕುಗಳನ್ನು ನಿರ್ಬಂಧಿಸಿ ಈ ಯೋಜನೆಯನ್ನು ಹೇರುವದು ಸಂವಿಧಾನದ ಹಕ್ಕಿಗೆ ಚ್ಯುತಿ ತಂದಂತೆ, ಗುಜರಾತ್, ಮಹರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯದ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ. ಈಗಾಗಲೇ ಕೇರಳ ರಾಜ್ಯ ಇದಕ್ಕೆ ಆಕ್ಷೇಪಣೆ ಸಲ್ಲಿಸಿ ಗ್ರಾಮವಾರು ಜನವಸತಿ ಪ್ರದೇಶದÀ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಿರುವದರಿಂದ ಆ ರಾಜ್ಯದ ಜನ ವಸತಿ ಪ್ರದೇಶವನ್ನು ಈ ಯೋಜನೆಯಿಂದ ಕೈ ಬಿಡಲಾಗಿದೆ ಆದರೆ ಗುಜರಾತ್, ಮಹರಾಷ್ಟ್ರ, ತಮಿಳುನಾಡು ಯಾವದೇ ಆಕ್ಷೇಪಣೆ ಸಲ್ಲಿಸಿಲ್ಲ. ನಮ್ಮ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಿದೆಯಾದರೂ ಜನ ವಸತಿ ಪ್ರದೇಶದ ಗ್ರಾಮವಾರು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿಲ್ಲ ಎಂದು ಆರೋಪಿಸಿದರು.

ಟಿ.ಶೆಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ ಮಾತನಾಡಿ, ಅರಣ್ಯ ಇಲಾಖೆಯ ಸುಪರ್ಧಿಯಲ್ಲಿರುವ ರಕ್ಷಿತಾರಣ್ಯದಲ್ಲಿ ವ್ಯಾಪಕವಾಗಿ ಮರ ಹನನ ಹಾಗೂ ಮರ ಕಳ್ಳತನವಾಗುತ್ತಿದೆ ಇದನ್ನು ಸರಿಯಾಗಿ ತಡೆಗಟ್ಟಲು ವಿಫಲವಾದ ಸರಕಾರ ಇಲ್ಲಿನ ರೈತರು ಹಾಗೂ ಬೆಳೆಗಾರರು ಉಳಿಸಿಕೊಂಡಿರುವ ಪರಿಸರದ ಮೇಲೆ ಅದನ್ನು ರಕ್ಷಿಸುವ ನೆಪದಲ್ಲಿ ಸೂಕ್ಷ್ಮ ಪರಿಸರ ತಾಣವೆನ್ನುವ ಯೋಜನೆಯನ್ನು ಹೇರುವದು ಸರಿಯಲ್ಲ. ಅರಣ್ಯವನ್ನು ರಕ್ಷಿಸಲು ಸರಕಾರ ಮುಂದಾಗಲಿ. ಜನ ವಸತಿ ಪ್ರದೇಶದ ಮೇಲೆ ಈ ಯೋಜನೆ ಬೇಡವೆಂದು ಹೇಳಿದರು. ಜಿಲ್ಲಾ ಬಿ.ಜೆ.ಪಿ ಮಾಜಿ ಉಪಾಧ್ಯಕ್ಷ ಬೊಟ್ಟಂಗಡ ಎಂ.ರಾಜು ಮಾತನಾಡಿ, ಈ ಯೋಜನೆಯ ಗಂಭೀರತೆಯನ್ನು ಜನರು ಅರಿತುಕೊಂಡು ಅದರ ವಿರುದ್ಧ ಹೋರಾಟ ನಡೆಸಬೇಕು. ರೈತರಿಗೆ ಹಾಗೂ ಬೆಳೆಗಾರರಿಗೆ ಈ ಯೋಜನೆಯಿಂದ ಅನ್ಯಾಯವಾಗಬಾರದು. ಈ ಯೋಜನೆಯಿಂದ ಸಂಸ್ಕøತಿ ನಾಶವಾಗಲಿದ್ದು, ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.

ಸೂಕ್ಷ್ಮ ಪರಿಸರ ತಾಣ ಯೋಜನೆಯ ಹೋರಾಟ ಸಮಿತಿಯ ಮುಖಂಡ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ ಈ ಯೋಜನೆ ಜಾರಿಯಾದರೆ ದೈನಂದಿನ ಜನಜೀವನಕ್ಕೆ ತೊಂದರೆಯಾಗಲಿದೆ. ಜನ ವಸತಿ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಬಾರದೆಂದು ಜಿಲ್ಲೆಯಿಂದ ವಿವಿಧ ಸಂಘ ಸಂಸ್ಥೆ ಹಾಗೂ ವೈಯಕ್ತಿಕವಾಗಿ ಜನರು ಸುಮಾರು ಐದು ಸಾವಿರ ಆಕ್ಷೇಪಣೆ ಪತ್ರಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು, ಇದನ್ನು ಸರಕಾರ ಪರಿಗಣಿಸದೆ ಇರುವದಕ್ಕೆ ವಿಷಾದಿಸಿದರು. ಪ್ರತಿಭಟನೆಯಲ್ಲಿ ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ ಮಚ್ಚಮಾಡ ಸುಮಂತ್, ಸದಸ್ಯ ಚೊಟ್ಟೆಯಂಡಮಾಡ ಉದಯ, ಪ್ರಮುಖರಾದ ಮಾಣೀರ ಮುತ್ತಪ್ಪ, ಕುಪ್ಪುಡೀರ ಪೊನ್ನಪ್ಪ, ಬಿರುನಾಣಿ ಗ್ರಾ.ಪಂ ಸದಸ್ಯ ಕಾಯಪಂಡ ಸುನಿಲ್, ಮಾಣೀರ ಉಮೇಶ್, ಚೊಟ್ಟೆಯಾಂಡಮಾಡ ಪ್ರಜ, ಕುಂಞಂಗಡ ಕೃಷ್ಣ, ತಡಿಯಂಗಡ ಕರುಂಬಯ್ಯ, ಬಲ್ಯಮಿದೇರಿರ ವಿಜಯಪ್ರಸಾದ್, ಚೋನೀರ ಮಧು ಮತ್ತಿತರರು ಹಾಜರಿದ್ದರು.