ವಿರಾಜಪೇಟೆ, ಮಾ. 13 : ಸಮಾಜದಲ್ಲಿ ಗೌರವ ಸ್ಥಾನ ಪಡೆಯುವದರೊಂದಿಗೆ ಆತ್ಮಾಭಿಮಾನ ದಿಂದ ಬದುಕುವ ಹಾಗೂ ಮುನ್ನಡೆ ಯುವ ಹಕ್ಕು ಪ್ರತಿ ಮಹಿಳೆಯರಿಗಿದೆ ಎಂದು ಪ್ರೊ. ಇಟ್ಟೀರ ಬಿದ್ದಪ್ಪ ಅಭಿಪ್ರಾಯಪಟ್ಟರು.

ಅಖಿಲ ಕೊಡವ ಪೊಮ್ಮಕ್ಕಡ ಪರಿಷತ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವೀರಾಜಪೇಟೆಯ ಅಖಿಲ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ರಾಷ್ಟ್ರೀಯ, ಜನಾಂಗೀಯ ಭಾಷಾವಾರು, ಸಾಂಸ್ಕøತಿಕ ಆರ್ಥಿಕ ರಾಜಕೀಯ ಕ್ಷೇತ್ರ, ಎಲ್ಲದರಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದರು. ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಸ್ತ್ರೀ ಗೌರವಕ್ಕೆ ಅರ್ಹಳಾದವಳು, ಮಹಿಳೆಯರು ದೌರ್ಜನ್ಯಗಳು, ದಬ್ಬಾಳಿಕೆಗಳು ಅತ್ಯಾಚಾರದಂತಹ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ನಮ್ಮ ದೇಶದಲ್ಲಿ ಕಾನೂನು ಬಿಗಿಯಾಗಬೇಕು, ಮನುಷ್ಯರು ಮಾನವೀಯತೆ ಮೈಗೂಡಿಸಿಕೊಳ್ಳ ಬೇಕು ಎಂದರು.

ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಯಿಯನ್ನೇ ದೇವರು ಎಂದು ಪೂಜಿಸುವ ಸಂಸ್ಕøತಿ ನಮ್ಮ ದೇಶದ್ದು, ಬಹಳ ವರ್ಷಗಳ ಹಿಂದೆ ಹೆಣ್ಣು ಮಗು ಹುಟ್ಟಿದರೆ ಅನಿಷ್ಟ ಎನ್ನುತ್ತಾ ಮಗುವನ್ನು ಕೊಲ್ಲುವ ಪದ್ಧತಿ ಇತ್ತು. ಪುರುµ ಪ್ರಧಾನ ಸಮಾಜದಲ್ಲಿ ಮಹಿಳೆಯರೆಂದರೆ ತಾತ್ಸಾರದಿಂದ ನೋಡುತ್ತಾ ಅವರನ್ನು ಅಬಲರು ಎಂದೇ ಬಿಂಬಿಸಲಾಗಿತ್ತು. ಯಾವುದೇ ಸಮಾನತೆ ದೊರಕುತ್ತಿರಲಿಲ್ಲ. ಗಂಡು ಹೆಣ್ಣಿಗೆ ಸಮಾನ ವಿದ್ಯಾಭ್ಯಾಸ ದೊರಕುವ ಅವಕಾಶ ದೊರೆತ ಮೇಲೆ ಸಮಾನತೆ ಬಂದಿದೆ ಎಂದರು.

ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಅಮ್ಮುಣಿಚಂಡ ರಾಜಾ ನಂಜಪ್ಪ, ಕಾನೂರು ಮಹಿಳಾ ಸಮಾಜದ ಅಧ್ಯಕ್ಷೆ ಅಳಮೇಂಗಡ ದೇವಮ್ಮಾಜಿ ತಮ್ಮಯ್ಯ, ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಮಹಿಳಾ ದಿನಾಚರಣೆಯ ಮಹತ್ವದ ಕುರಿತು ವಿಷಯ ಮಂಡಿಸಿದರು. ಕಾನೂರುವಿನ ಮಹಿಳಾ ಸಮಾಜದ ಅಧ್ಯಕ್ಷೆ ಅಳಮೇಂಗಡ ದೇವಮ್ಮಾಜಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಪೂವಿ ಮುತ್ತಪ್ಪ ಸ್ವಾಗತಿಸಿ, ಮಂಡೇಪಂಡ ಗೀತಾ ಮಂದಣ್ಣ ಕಾರ್ಯಕ್ರಮ ನಿರೂಪಿಸಿದರೆ, ಕಾಮುಣಿ ಪೂಣಚ್ಚ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಟಿ.ಶೆಟ್ಟಿಗೇರಿಯ ಸಂಗಮ ಮಹಿಳಾ ಸಮಾಜದ ಸದಸ್ಯರಿಂದ ಉಮ್ಮ್ಮತ್ತಾಟ್ ಪ್ರದರ್ಶನ ನಡೆಯಿತು. ನಂತರ ಮುಕ್ಕಾಟಿರ ಸೌಮ್ಯ ಕಾವೇರಪ್ಪ ಅವರು ಕೊಡವರ ಮದುವೆಯಲ್ಲಿ ‘ಸಂಬಂಧ ಅಡ್‍ಕುವೋ ‘ ಕಾರ್ಯಕ್ರಮ ನಡೆಸಿಕೊಟ್ಟರು.