ಮಡಿಕೇರಿ, ಮಾ. 13: ವಿಶ್ವ ಭೂಪಟದಲ್ಲಿ ನಿತ್ಯ ಹರಿದ್ವರ್ಣ ವನಸಿರಿಯ ಪಟ್ಟಿಯಲ್ಲಿ ಭಾರತದ ಹಿಮಾಲಯ ತಪ್ಪಲುವಿನಿಂದ ಕಡಲತಡಿ ತನಕ ಕೊಡಗಿನ ಹಸಿರು ಕಾಡು ಕೂಡ ಸಹಸ್ರಮಾನಗಳಿಂದ ಗುರುತಿಸಲ್ಪಟ್ಟಿದೆ. ಗಾತ್ರದಲ್ಲಿ ಕಿರಿದಾಗಿ ರುವ ಭೌಗೋಳಿಕ ಸೀಮೆ ಕೊಡಗು ಎಲ್ಲಾ ರೀತಿಯಿಂದಲೂ ವನದೇವಿ ವಿಜೃಂಭಿಸಿದ ಸುಂದರ ತಾಣವೇ ಆಗಿದೆ.

ಪ್ರಸಕ್ತ ಕೇಂದ್ರ ಸರಕಾರವು ರಾಜ್ಯ ಅರಣ್ಯ ಇಲಾಖೆಯ ಪ್ರಸ್ತಾವನೆಯಂತೆ, ಈ ಪುಟ್ಟ ಜಿಲ್ಲೆಯ ಪ್ರಮುಖ 27 ಗ್ರಾಮಗಳನ್ನು ವನ್ಯಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕರಡು ಪ್ರತಿ ಸಿದ್ಧಗೊಳಿಸಿದೆ. ಈ ಇಪ್ಪತ್ತೇಳು ಪ್ರಸ್ತಾವಿತ ಗ್ರಾಮಗಳ ನಡುವೆ 25ಕ್ಕೂ ಹೆಚ್ಚಿನ ಉಪಗ್ರಾಮಗಳು ಆ ಪಟ್ಟಿಯಲ್ಲಿ ಹೆಸರಿಸಿಲ್ಲದಿದ್ದರೂ, ಮುಂದೆ ಆ ಗ್ರಾಮಗಳು ಕೂಡ ಸೂಕ್ಷ್ಮ ವನ್ಯ ಪರಿಸರ ಪ್ರದೇಶದೊಳಗೆ ಗುರುತಿಸಲ್ಪಡಲಿವೆ.

ರಾಜಕೀಯ ಮೌನ

ಈ ಹಿಂದೆ ಕಸ್ತೂರಿರಂಗನ್ ಅಥವಾ ಗಾಡ್ಗಿಳ್ ವರದಿ ಹೆಸರಿನಲ್ಲಿ ಈ ಸೂಕ್ಷ್ಮ ವನ್ಯಪರಿಸರ ಪ್ರದೇಶ ವಿಚಾರ ಸದ್ದು ಮಾಡಿದಾಗ ಕೊಡಗು ಸಹಿತ ಮಲೆನಾಡು ಜಿಲ್ಲೆಗಳ ಜನ ಭಾರೀ ಸದ್ದು ಮಾಡಿದ್ದುಂಟು. ರಾಜಕೀಯ ನಾಯಕರು ಪರಸ್ಪರ ಕೆಸರೆರಚಿಕೊಂಡು ಜವಾಬ್ದಾರಿಯಿಂದ ಜಾರಿಕೊಂಡಿದ್ದು ಆಯಿತು.

ಪರಿಸರವಾದಿಗಳ ತಂತ್ರ

ಈ ಸನ್ನಿವೇಶವನ್ನು ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳು ಸರಿಯಾಗಿಯೇ ಬಳಸಿಕೊಂಡು, ಕೇಂದ್ರ ಸರಕಾರಕ್ಕೆ ದಾಖಲೆಗಳ ಸಹಿತ ಕೊಡಗು ಜಿಲ್ಲೆಯನ್ನು ಸೂಕ್ಷ್ಮ ವನ್ಯಪರಿಸರ ಪ್ರದೇಶವೆಂದು ಘೋಷಿಸಲು ತಂತ್ರಗಾರಿಕೆ ಹೆಣೆದಿದ್ದು, ಗುಟ್ಟೇನು ಅಲ್ಲವಷ್ಟೆ.

ಕರಡು ಸಿದ್ಧ

ಈ ಎಲ್ಲಾ ಬೆಳವಣಿಗೆ ನಡುವೆ ಜೀವ ಸಂಕುಲ ಹಾಗೂ ಪ್ರಾಕೃತಿಕ ಸಮತೋಲನ ಉದ್ದೇಶದಿಂದ ಭಾರತ ಸರಕಾರವು ಸಮಗ್ರ ನೀತಿಯೊಂದನ್ನು ಜಾರಿಗೊಳಿಸಲು ಈಗಾಗಲೇ ಕರಡು ಪ್ರತಿ ಸಿದ್ಧಗೊಳಿಸಿ ಆಯಾ ರಾಜ್ಯ ಸರಕಾರಗಳಿಗೆ ಅಭಿಪ್ರಾಯ ಕೇಳಿದೆ. ಈ ಹಂತದಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಪ್ರಕೃತಿ, ಪರಿಸರ, ಜೀವ ಸಂಕುಲ ರಕ್ಷಣೆಯಲ್ಲಿ ಆಡಳಿತಾರೂಢ ಸರಕಾರಗಳು ಕಾನೂನಿಗೆ ತಲೆಬಾಗಲೇ ಬೇಕಾದ ಅನಿವಾರ್ಯತೆ ನಿರ್ಮಾಣ ಗೊಂಡಿದೆ. ಹೀಗಾಗಿ ಕೇಂದ್ರ ಕಾನೂನು ಜಾರಿಗೊಳಿಸಲು ಮುಂದಾಗುವದ ರೊಂದಿಗೆ ಆಯಾ ರಾಜ್ಯ ಸರಕಾರಗಳು ತಲೆದೂಗಲೇ ಬೇಕೆಂಬದು ವಾಸ್ತವ. ಈ ಅಂಶವನ್ನು ಸ್ಪಷ್ಟವಾಗಿ ಕರ್ನಾಟಕ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಉಲ್ಲೇಖಿಸಿ ಸಂಪುಟ ಉಪಸಮಿತಿಯ ಒಪ್ಪಿಗೆ ಪಡೆದು ಕೇಂದ್ರಕ್ಕೂ ರವಾನಿಸಿದ್ದಾಗಿದೆ.

ಜಾಣ ಮೌನ

ಈಗಾಗಲೇ ಕೇಂದ್ರ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಂತಿಮವಾಗಿ ಕರಡು ನೀತಿ ಜಾರಿಗೆ ರಾಜ್ಯದ ಗಮನ ಸೆಳೆದಿದೆ. ರಾಜ್ಯವು ಕೂಡ ಜಾಣ ಮೌನದೊಂದಿಗೆ ಕೇಂದ್ರದೆಡೆಗೆ ಬೆರಳು ತೋರಿಸುತ್ತಾ ಹೊಣೆಗಾರಿಕೆಯಿಂದ ನುಣುಚಿ ಕೊಳ್ಳಲು ಮುಂದಾದಂತಿದೆ. ನೆರೆಯ ಕೇರಳದಂತೆ ಒಟ್ಟಾರೆ ರಾಜ್ಯದ ಹಿತ ಅಥವಾ ಜನರ ಹಿತ ಯಾರಿಗೂ ಬೇಕಿಲ್ಲ!.

ಹೀಗಾಗಿ ಕೇಂದ್ರ ವಿಧಿಸಿರುವ 60 ದಿನಗಳ ಕಾಲಾವಕಾಶ ಹೊರತಾಗಿಯೂ ರಾಜ್ಯದ ಸಹಿತ ಕೊಡಗಿನ ಮಂದಿ ಆಕ್ಷೇಪಣೆ ಸಲ್ಲಿಸುವದು ಅನಿವಾರ್ಯವಾಗಿದೆ. ತಪ್ಪಿದಲ್ಲಿ ಕೊಡಗಿನ ಪ್ರಸ್ತಾವಿತ ಸೂಕ್ಷ್ಮ ಪರಿಸರ ಪ್ರದೇಶದ ಎಲ್ಲಾ ಗ್ರಾಮಗಳು ನಿರ್ಬಂಧಿತ ಪಟ್ಟಿಯಲ್ಲಿ ಸ್ಥಾನ ಪಡೆಯುವದು ಸುಸ್ಪಷ್ಟವೇ ಸರಿ.

-ಶ್ರೀಸುತ.