(ವರದಿ-ಚಂದ್ರಮೋಹನ್)

ಕುಶಾಲನಗರ, ಮಾ. 13: ಕುಶಾಲನಗರದಲ್ಲಿ ವಾಹನಗಳನ್ನು ತೊಳೆಯುವ ಸರ್ವೀಸ್ ಸ್ಟೇಷನ್ ಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ಗಳು ನೇರವಾಗಿ ನದಿ ಸೇರಿ ನದಿ ನೀರು ಮಾಲಿನ್ಯಗೊಳ್ಳುವದ ರೊಂದಿಗೆ ದುಷ್ಪರಿಣಾಮ ಉಂಟು ಮಾಡುತ್ತಿರುವದು ಕಂಡುಬಂದಿದೆ.

ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ 10 ಕ್ಕೂ ಅಧಿಕ ಸರ್ವೀಸ್ ಸ್ಟೇಷನ್‍ಗಳು ದಿನನಿತ್ಯ ಕಾರ್ಯಾಚರಣೆ ನಡೆಸುತ್ತಿದ್ದು ಈ ಮೂಲಕ ಉತ್ಪಾದನೆ ಯಾಗುವ ತ್ಯಾಜ್ಯಗಳು ಚರಂಡಿ ಮೂಲಕ ನದಿಗೆ ಹರಿಸಲಾಗುತ್ತಿದೆ. ಸರ್ವೀಸ್ ಸ್ಟೇಷನ್‍ನಲ್ಲಿ ವಾಹನ ಗಳಿಂದ ಹೊರ ಸೂಸುವ ಎಣ್ಣೆ ಪದಾರ್ಥಗಳು, ಗ್ರೀಸ್ ಮುಂತಾದ ವಸ್ತುಗಳು ಈ ನೀರಿನೊಂದಿಗೆ ಹರಿಯುತ್ತಿದ್ದು ನದಿಯಲ್ಲಿ ನೀರು ಸಂಪೂರ್ಣ ಮಾಲಿನ್ಯಗೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ನದಿ ನೀರಿನಲ್ಲಿ ಪೆಟ್ರೋಲ್, ಡೀಸೆಲ್ ಮತ್ತಿತರ ತೈಲ ವಸ್ತುಗಳು ಹರಿಯಲು ಪ್ರಾರಂಭಿಸಿದ್ದು ಇದರೊಂದಿಗೆ ಗ್ರೀಸ್ ಇತ್ಯಾದಿ ವಸ್ತುಗಳಿಂದ ಜಲಚರಗಳು ಸಂಪೂರ್ಣ ನಾಶಗೊಳ್ಳುತ್ತಿವೆ. ಪ್ರಾಣಿಪಕ್ಷಿಗಳು ನೇರವಾಗಿ ಇದೇ ನೀರನ್ನು ಸೇವಿಸುವದರಿಂದ ಇವುಗಳ ಪ್ರಾಣಕ್ಕೂ ಸಂಚಕಾರ ಉಂಟಾಗುತ್ತಿದೆ. ಗುಡ್ಡೆಹೊಸೂರು ಭಾಗದಿಂದ ಕುಶಾಲನಗರ ಮಾರುಕಟ್ಟೆ ತನಕ ಇಂತಹ ಸರ್ವೀಸ್ ಸ್ಟೇಷನ್‍ಗಳಿಂದ ಹೊರಸೂಸುವ ಕಲುಷಿತ ನೀರು ನದಿ ಸೇರುವ ಹಿನ್ನಲೆಯಲ್ಲಿಇದೇ ನೀರನ್ನು ಪಟ್ಟಣ ಹಾಗೂ ಗ್ರಾಮ ವ್ಯಾಪ್ತಿಯ ನಾಗರೀಕರು ಬಳಸಬೇಕಾಗಿದೆ. ಇಂತಹ ಅಪಾಯಕಾರಿ ವಸ್ತುಗಳು ನೇರವಾಗಿ ಮನುಷ್ಯನ ದೇಹಕ್ಕೆ ಸೇರುವ ಹಿನ್ನಲೆಯಲ್ಲಿ ಮಾರಕ ರೋಗಗಳಾದ ಕ್ಯಾನ್ಸರ್ ಮತ್ತಿತರ ಖಾಯಿಲೆಗಳು ಬರಲು ಸಾಧ್ಯ ಎನ್ನುವದು ಸ್ಥಳೀಯ ವೈದ್ಯರಾದ ಡಾ. ಹರಿಶೆಟ್ಟಿ ಅವರ ಅಭಿಪ್ರಾಯವಾಗಿದೆ. ಈ ಬಗ್ಗೆ ಸ್ಥಳಿಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಪ್ರಕರಣದ ಬಗ್ಗೆ ಕ್ರಮಕ್ಕೆ ಮುಂದಾಗಲಿರುವದಾಗಿ ಹಿರಿಯ ಸದಸ್ಯರಾದ ಹೆಚ್.ಜೆ.ಕರಿಯಪ್ಪ ಅವರು ಪತ್ರಿಕೆಯೊಂದಿಗೆ ಭರವಸೆ ನೀಡಿದ್ದಾರೆ. ಈಗಾಗಲೆ ಪಟ್ಟಣ ಪಂಚಾಯ್ತಿಗೆ ನೂತನ ಸರ್ವೀಸ್ ಸ್ಟೇಷನ್ ಪ್ರಾರಂಭಿಸಲು ಮನವಿಗಳು ಬಂದಿದ್ದು ಇದಕ್ಕೆ ಆಸ್ಪದ ಕಲ್ಪಿಸುವುದಿಲ್ಲ ಹಾಗೂ ಸಮರ್ಪಕ ವಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಚರಂಡಿಗೆ ಹರಿಸಿ ನದಿಗೆ ಸೇರುವಂತೆ ಮಾಡುವ ಘಟಕಗಳ ಪರವಾನಗಿ ಯನ್ನು ನವೀಕರಣ ಮಾಡಲು ಆಕ್ಷೇಪಣೆ ಸಲ್ಲಿಸಲಾಗುವದು ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆ ಜೀವನದಿ ಕಾವೇರಿಗೆ ಅಪಾಯಕಾರಿ ತ್ಯಾಜ್ಯಗಳನ್ನು ನೇರವಾಗಿ ಹರಿಸುವ ಇಂತಹ ಘಟಕಗಳನ್ನು ತಕ್ಷಣವೇ ರದ್ಧುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.