*ಗೋಣಿಕೊಪ್ಪ, ಮಾ. 13: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂಜಾಗ್ರತಾ ಕ್ರಮಕೈಗೊಳ್ಳದ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಇಲಾಖೆ ಅಧಿಕಾರಿಯನ್ನು ಶಾಸಕ ಕೆ.ಜಿ. ಬೋಪಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು. ಪೊನ್ನಂಪೇಟೆ ತಾ .ಪಂ. ಕಚೇರಿ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ತಾಲೂಕು ಇಲಾಖೆ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಯ ನಿರ್ಲಕ್ಷ್ಯಕ್ಕೆ ಗರಂ ಆದ ಶಾಸಕರು ಅಧಿಕಾರಿಯ ಕಾರ್ಯ ಧಕ್ಷತೆಯ ಬಗ್ಗೆ ಪ್ರಶ್ನಿಸಿದರು.

ಬೇಸಿಗೆ ಪ್ರಾರಂಭವಾಗಿದ್ದು ಕುಡಿಯುವ ನೀರಿನ ಅಭಾವ ಎದುರಾಗಿದೆ. ಅಧಿಕಾರಿ ಈ ಬಗ್ಗೆ ಗಮನಹರಿಸದೆ ಬೇಜವಾಬ್ದಾರಿತನ ದಿಂದ ನಡೆದುಕೊಂಡಿದ್ದಾರೆ. ತಾಲೂಕು ದಂಡಾಧಿಕಾರಿಗಳು ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವ ಸಭೆ ಕರೆದು ಪರಿಹಾರೋ ಪಾಯ ಕಂಡುಕೊಳ್ಳಬೇಕೆಂದು ಸೂಚಿಸಿದರು.

ತಾಲೂಕಿನ ಬಹುತೇಕ ಭಾಗಗ ಳಲ್ಲಿ ಕುಡಿಯುವ

(ಮೊದಲ ಪುಟದಿಂದ) ನೀರು ಸಮಸ್ಯೆ ಕಾಪಾಡಲು ಅಧಿಕಾರಿಯ ನಿರ್ಲಕ್ಷ್ಯ ಕಾರಣ. ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಇಲಾಖೆಗೆ ಸಾದ್ಯ ವಾಗಲಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.

ಗೋಣಿಕೊಪ್ಪಲು, ಹಾತೂರು, ಮಾಲ್ದಾರೆ, ದೇವರಪುರ, ಪೊನ್ನಂಪೇಟೆ, ತಿತಿಮತಿ, ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಇಲಾಖೆ ಅನುದಾನದಲ್ಲಿ ತೆಗೆಯುವ ಕೊಳವೆ ಬಾವಿಗಳಲ್ಲಿ ಜಲಮೂಲ ಕ್ಷೀಣಿಸಿದೆ. ಬೇಸಿಗೆ ಪ್ರಾರಂಭವಾದುದರಿಂದ ನೀರಿನ ಅಭಾವ ಎದುರಾಗಿದೆ ಎಂದು ಜಿ. ಪಂ. ಸದಸ್ಯರು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭ ಉತ್ತರಿಸಿದ ಅಧಿಕಾರಿ ಲಕ್ಷ್ಮಿಕಾಂತ್ ತಾಲೂಕಿನಲ್ಲಿ 16 ಕೊಳವೆ ಬಾವಿಗಳನ್ನು ತೋಡಲಾಗಿದೆ. ಅದರಲ್ಲಿ 2 ಕೊಳವೆ ಬಾವಿಗಳಲ್ಲಿ ನೀರಿನ ಮೂಲ ಕ್ಷೀಣಿಸಿದೆ ಎಂದು ತಿಳಿಸಿದರು. 150 ರಿಂದ 200 ಅಡಿ ಕೊರೆದರು ನೀರು ಸಿಗುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಕೊಳವೆ ಬಾವಿಗಳನ್ನು 700 ಅಡಿ ಕೊರೆದರೆ ನೀರು ಸಿಗುತ್ತದೆ. ಕಾಟಚಾರಕ್ಕೆ ಕಾಮಗಾರಿ ನಡೆಸಿದರೆ ಸಫಲತೆ ಕಾಣಲು ಸಾದ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿತಿಮತಿ, ಮರೂರು ಗಿರಿಜನ ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆಶ್ರಮ ವಸತಿ ಶಾಲೆಯಲ್ಲಿ ಮಕ್ಕಳು ಗುಣಮಟ್ಟದ ನೀರು ಕುಡಿಯುತ್ತಿಲ್ಲ. ಹಳದಿ ಬಣ್ಣದ ಕೊಳಕು ನೀರು ಲಭ್ಯವಾಗುತ್ತಿದೆ ಮತ್ತು ನೀರಿನ ಟ್ಯಾಂಕ್‍ನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ಅಶುಚಿತ್ವ ನೀರು ಸೇವನೆಯಿಂದ ಮಕ್ಕಳು ಅನಾರೋಗ್ಯದಿಂದ ನರಳುತ್ತಿದ್ದಾರೆ. ಅಧಿಕಾರಿಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಜಿ. ಪಂ. ಸದಸ್ಯ ಸಿ.ಕೆ. ಬೋಪಣ್ಣ ಆರೋಪಿಸಿದರು. ಸಭೆಗೆ ಹಾಜರಾಗದ ಅರಣ್ಯ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಶಾಸಕ ಬೋಪಯ್ಯ ಇ.ಓ.ಗೆ ಸೂಚಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಹಲವು ಲೋಪಗಳು ಎದುರಾಗಿವೆ. ಪಡಿತರ ಚೀಟಿಹೊಂದಿರುವ ಸದಸ್ಯರ ಅಧಾರ್ ಸಂಖ್ಯೆಯ ನೋಂದಣಿ ಆಗಿಲ್ಲ ಎಂದು ಹೇಳುತ್ತ ತಿಂಗಳಲ್ಲಿ ಕುಟುಂಬ ಸದಸ್ಯರೊಬ್ಬರ ಪಡಿತರ ಸಾಮಗ್ರಿಯನ್ನು ಕಡಿತಗೊಳಿಸಿದ್ದಾರೆ. ಇದರಿಂದ ಬಡವರಿಗೆ ಸಮಸ್ಯೆ ಆಗಿದೆ ಎಂದು ಜಿ.ಪಂ. ಸದಸ್ಯೆ ಭವ್ಯ ಆರೋಪಿಸಿದರು. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸದಸ್ಯರೊಬ್ಬರಿಗೆ ನೀಡುವ 5 ಕೆ.ಜಿ. ಅಕ್ಕಿಯ ಬದಲಾಗಿ 3 ಅಥವಾ 4 ಕೆ.ಜಿ. ನೀಡುತ್ತಿದ್ದಾರೆ. ಉಳಿದ ಅಕ್ಕಿಯನ್ನು ಕಾಳಸಂತೆಯಲ್ಲಿ 17 ರೂ.ಗಳಿಗೆ ಮಾರಾಟವಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಲು ಆಹಾರ ಇಲಾಖೆ ಮುಂದಾಗಿಲ್ಲ ಎಂದು ಆರೋಪಿಸಿದರು.

ಸರ್ಕಾರ ನೀಡುವ ಉಪ್ಪು ಅಯೋಡಿನ್ ಅಂಶ ಹೊಂದಿಲ್ಲ. ಸಾಂಬಾರ್, ಪಲ್ಯಗಳಿಗೆ ಉಪ್ಪು ಸಿಂಪಡಿಸಿದರೆ ಬಣ್ಣ ಬಿಡುತ್ತಿದೆ. ಇದರಿಂದ ಸಾಂಬಾರಿನ ರುಚಿ ಹದಗೆಡುತ್ತಿದೆ ಎಂದು ಹಾತೂರು ಗ್ರಾ.ಪಂ. ಅಧ್ಯಕ್ಷೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿ ಶಿವಲಿಂಗಯ್ಯ ಆರೋಪಗಳ ಬಗ್ಗೆ ಪರೀಶಿಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನೂತನ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸ ಲಾಗುತ್ತಿದೆ. ಸ್ಥಳೀಯ ಗ್ರಾ.ಪಂ.ಯನ್ನು ಸಂಪರ್ಕಿಸಲು ಮಾಹಿತಿ ನೀಡಿದರು.

ಶಾಲೆಗಳಿಗೆ ದಾನಿಗಳು ನೀಡಿದ ಜಾಗವನ್ನು ಸರ್ಕಾರದ ಹೆಸರಿಗೆ ವರ್ಗಾಯಿಸಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಮಹದೇವ್ ಸ್ವಾಮಿಗೆ ಸೂಚಿಸಿದರು. ಶಾಲೆಗಳಿಗೆ ಹಿಂದೆ ದಾನ ನೀಡಿದ ಸ್ಥಳಗಳು ಸರ್ಕಾರದ ಹೆಸರಿಗೆ ವರ್ಗವಾಗಿಲ್ಲ. ಹೀಗಾಗಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಹೆಚ್.ಕೆ. ಪಾಂಡು ತಿಳಿಸಿದರು. ತಾಲೂಕು ಕೃಷಿ ಇಲಾಖೆ ವತಿಯಿಂದ ತಾಲೂಕಿನಲ್ಲಿ ಭತ್ತದ ಕೃಷಿಯಲ್ಲಿ ಸಾಧನೆ ಮಾಡಿದ ಮೂವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ತಾ.ಪಂ. ಅಧ್ಯಕ್ಷ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಕಿರಣ್ ಪಡ್ನೇಕರ್, ಜಿ.ಪಂ. ಸದಸ್ಯರುಗಳಾದ ಶ್ರೀಜಾ ಶಾಜಿ ಉಪಸ್ಥಿತರಿದ್ದರು.