ಗೋಣಿಕೊಪ್ಪಲು, ಮಾ. 13: ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕೊಡಗು ಜಿಲ್ಲೆಯಿಂದ ಬಲಿಜ ಸಮಾಜ ನೇತ್ರತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಬಲಿಜ ಬಂಧು ಗಣತಿ ಕಾರ್ಯಕ್ಕೆ ತಾ.12 ರಂದು ಬೆಕ್ಕೆಸೊಡ್ಲೂರು ದೊಡ್ಡಮನೆಯಿಂದ ಚಾಲನೆ ನೀಡಲಾಯಿತು.

ಒಟ್ಟು 8 ಮನೆಗಳಿಂದ 25 ಸದಸ್ಯರ ಗಣತಿಯನ್ನು ಗ್ರಾಮದ ಟಿ.ಎ. ಪಾಪಯ್ಯ, ಹಿರಿಯರಾದ ಟಿ.ಆರ್. ರಾಮಕೃಷ್ಣ ಹಾಗೂ ಟಿ.ಎಲ್. ಶ್ರೀನಿವಾಸ್ ಜಂಟಿಯಾಗಿ ನೆರವೇರಿಸಿದರು.

ಫ್ರೆಂಡ್‍ಶಿಪ್ ಡೇ

ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಲಿಜ ಸಮಾಜವೊಂದು ಗ್ರಾಮ ಪಂಚಾಯಿತಿ ಮಟ್ಟದ ಗಣತಿ ಕಾರ್ಯಕ್ಕೆ ಮುಂದಾಗಿದ್ದು, ಮಾರ್ಚ್ 12 ರ ಅವಿಸ್ಮರಣೀಯ ದಿನವನ್ನು ಇನ್ನು ಮುಂದೆ ‘ಬಲಿಜ ಸ್ನೇಹ ದಿನಾಚರಣೆ’ಯಾಗಿ ರಾಜ್ಯಾದ್ಯಂತ ಆಚರಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.

ಬಲಿಜ ಗುರುಗಳಾದ ಕೈವಾರ ತಾತಯ್ಯ ಜನ್ಮದಿನಾಚರಣೆ, ಹಬ್ಬಗಳ ಆಚರಣೆ ಬಗ್ಗೆಯೂ ಚರ್ಚಿಸಲಾ ಯಿತು. ಇದೇ ಸಂದರ್ಭ ತಾ.29 ಚಾಂದ್ರಮಾನ ಯುಗಾದಿ ಅಂಗವಾಗಿ ನಾಪೂಕ್ಲುವಿನ ಕಕ್ಕುಂದ ಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಯಿತು.

ಕ್ಷೇಮ ನಿಧಿ ಸಮಿತಿ

ಇದೇ ಸಂದರ್ಭ ಕೊಡಗು ಜಿಲ್ಲಾ ಕ್ಷೇಮ ನಿಧಿ ಸಮಿತಿ ಸಂಚಾಲಕರನ್ನಾಗಿ ಕುಶಾಲನಗರದ ಜಿ.ಸತ್ಯನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವೀರಾಜಪೇಟೆ ತಾಲೂಕು ಕ್ಷೇಮನಿಧಿ ಸಮಿತಿ ಸಂಚಾಲಕರನ್ನಾಗಿ ಬೆಕ್ಕೆಸೊಡ್ಲೂರುವಿನ ಟಿ.ಎ. ಪಾಪಯ್ಯ, ಮಡಿಕೇರಿ ತಾಲೂಕುವಿನ ಸಂಚಾಲಕರನ್ನಾಗಿ ಮೂರ್ನಾಡುವಿನ ಟಿ.ಆರ್. ಸುಬ್ರಮಣ್ಯ ಹಾಗೂ ಸೋಮವಾರಪೇಟೆ ತಾಲೂಕಿಗೆ ಶಿರಂಗಾಲದ ಶ್ರೀನಿವಾಸ್ ಅವರನ್ನು ಇದೇ ಸಂದರ್ಭ ಆಯ್ಕೆ ಮಾಡಲಾಯಿತು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಈ ಸಂದರ್ಭ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬಲಿಜ ಸಂಘದ ನಿರ್ದೇಶಕ ಎನ್. ಹೇಮಂತ್‍ಕುಮಾರ್ ಗಣತಿ ಕಾರ್ಯಕ್ಕೆ ಶುಭಕೋರಿದರು.

ವೀರಾಜಪೇಟೆ ತಾಲೂಕು ಬಲಿಜ ಸಮಾಜದ ಅಧ್ಯಕ್ಷ ಎಸ್.ಕೆ. ಗಣೇಶ್ ನಾಯ್ಡು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಎಸ್. ಬಾಲಕೃಷ್ಣ ಅವರು ಗಣತಿ ಕಾರ್ಯ ದಾಖಲೆ ಅವಧಿಯಲ್ಲಿ ಸಂಪೂರ್ಣ ಸಹಕಾರ ನೀಡಲಾಗುವದು ಎಂದು ಹೇಳಿದರು.

ಅಮರ ನಾರಾಯಣ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಟಿ.ಬಿ. ಸತೀಶ್, ಟಿ.ಎನ್. ಲೀಲಾವತಿ, ಬಲಿಜ ಸಮಾಜ ಜಿಲ್ಲಾ ಉಪಾಧ್ಯಕ್ಷ ಟಿ.ಎಚ್. ಉದಯಕುಮಾರ್, ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಅನೂಷಾ ಟಿ.ಪಿ., ಸಂದೇಶ್ ಟಿ.ಪಿ., ಖಜಾಂಚಿ ಲೋಕನಾಥ್, ಮಾಜಿ ತಾಲೂಕು ಅಧ್ಯಕ್ಷ ಟಿ.ಎನ್. ಗಂಗಾಧರ್, ಶ್ಯಾಮಲಾ ಟಿ.ಸಿ., ದೇವಯ್ಯ, ಡಾ. ಟಿ.ಎನ್. ಲೋಕೇಶ್ವರಿ ಮುಂತಾದವರು ಉಪಸ್ಥಿತರಿದ್ದರು.

ಪ್ರಾರ್ಥನೆ ಲಾವಣ್ಯ ಗಣೇಶ್, ಸ್ವಾಗತ ಸ್ಪೂರ್ತಿ, ಪಾಪಯ್ಯ, ನಿರೂಪಣೆ, ಟಿ.ವಿ. ಲೋಕೇಶ್ ವಂದನಾರ್ಪಣೆ ನಿರ್ವಹಿಸಿದರು.