ಮಡಿಕೇರಿ, ಮಾ.13: ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಪೂರೈಕೆ ಮಾಡಲು ಪ್ರತೀ ತಾಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೇ ತಲಾ ರೂ. 20 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದ್ದಾರೆ. ನಗರದ ಜಿಲ್ಲಾಡಳಿತ ಭವನದಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಂಬಂಧ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ವೀಡಿಯೋ ಸಂವಾದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.ಜಾನುವಾರುಗಳಿಗೆ ನೀರು ಮತ್ತು ಮೇವು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಆದರೂ ಚಾಮರಾಜನಗರ, ಮೈಸೂರು, ಹಾಸನ, ಬೀದರ್, ಗದಗ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹೀಗೆ ನಾನಾ ಜಿಲ್ಲೆಗಳಲ್ಲಿ ಮೇವಿನ ಕೊರತೆ ಇರುವದು ಕಂಡುಬಂದಿದೆ. ಆದ್ದರಿಂದ ಜನರಿಗೆ ಆಹಾರ ಭದ್ರತೆ ಹೇಗಿದೆಯೋ ಹಾಗೆಯೇ ಜಾನುವಾರುಗಳಿಗೂ ಮೇವಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ತಾಲೂಕುಗಳಲ್ಲಿ ‘ಮೇವು ಬ್ಯಾಂಕ್’ ಸ್ಥಾಪನೆಗೆ ಮುಂದಡಿಯಿಡಲಾಗಿದೆ.

ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಹಾಲು ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಈಗಾಗಲೇ ಒಂದು ಸಭೆ ನಡೆದಿದ್ದು, ಮತ್ತೊಂದು ಸಭೆಯನ್ನು ಸದ್ಯದಲ್ಲೇ ಆಹ್ವಾನಿಸಲಾಗುವದು.

(ಮೊದಲ ಪುಟದಿಂದ) ಮುಂದಿನ ಸಭೆಯಲ್ಲಿ ಹಾಲು ದರ ನಿರ್ಧರಿಸಲಾಗುವದು. ಸರ್ಕಾರದಿಂದ ಈಗಾಗಲೇ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರತೀ ಹಳ್ಳಿಗಳಲ್ಲೂ ಜಾನುವಾರುಗಳ ಅನುಕೂಲಕ್ಕಾಗಿ ನೀರಿನ ತೊಟ್ಟಿಯನ್ನು ನಿರ್ಮಿಸಲು ಉದ್ದೇಶಿಸಿದೆ. ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲ ಮಾಡುವಂತೆ ತಿಳಿಸಿದರು.

ಇದಕ್ಕೂ ಮೊದಲು ಪಶುಪಾಲನಾ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ವಿಡಿಯೋ ಸಂವಾದ ಮೂಲಕ ನಡೆಸಿದ ಅವರು ಇಲಾಖೆಯ ಕಾರ್ಯಕ್ರಮಗಳಾದ ಪಶುಭಾಗ್ಯ ಯೋಜನೆ ಅನುಷ್ಠಾನ, ವಿಶೇಷ ಅಭಿವೃದ್ಧಿ ಯೋಜನೆ, ಹೈನುಗಾರಿಕೆ, ಅಮೃತ ಯೋಜನೆ, ಕುರಿ ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆ, ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದರು. ಕೆಲವು ಜಿಲ್ಲೆಗಳಲ್ಲಿ ಬೌದ್ಧಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸದಿರುವದಕ್ಕೆ ಸಚಿವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಈಗಾಗಲೇ ಬೇಸಿಗೆ ಶುರುವಾಗಿರುವುದರಿಂದ ಎಲ್ಲಾ ತಾಲ್ಲೂಕುಗಳಲ್ಲಿ ಮೇವು ಸಂಗ್ರಹಣೆ ಮಾಡಿಕೊಂಡಿರಬೇಕು. ಎಲ್ಲಾ ಕಡೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕು. ಯಾವದೇ ಕಾರಣಕ್ಕೂ ಮೇವು ಕೊರತೆ ಇದೆ ಎಂಬ ದೂರುಗಳು ಕೇಳಿ ಬರಬಾರದು ಎಂದು ಅವರು ಸೂಚನೆ ನೀಡಿದರು.

ಮಾರ್ಚ್ ಅಂತ್ಯದೊಳಗೆ ಎಸ್‍ಸಿಪಿ/ಟಿಎಸ್‍ಪಿ ಯೋಜನೆ ಸೇರಿದಂತೆ ಇತರೆ ಎಲ್ಲಾ ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ಪ್ರಗತಿ ಸಾಧಿಸುವಂತೆ ಎ.ಮಂಜು ಅವರು ಸೂಚನೆ ನೀಡಿದರು.