ಗೋಣಿಕೊಪ್ಪಲು, ಮಾ.14: ಬಿಸಿಲ ಬೇಗೆಯಿದ್ದು, ಆಶ್ರಮ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡದಂತೆ ಆವರಣದ ಸುತ್ತಲೂ ಶುಚಿತ್ವ ಕಾಪಾಡುವಂತೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಕರೆ ನೀಡಿದ್ದಾರೆ.

ಇತ್ತೀಚೆಗೆ ತಿತಿಮತಿ-ಮರೂರು ಸರ್ಕಾರಿ ಗಿರಿಜನ ವಸತಿ ಶಾಲೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲೆಯಲ್ಲಿರುವ ಎಲ್ಲ 11 ಆಶ್ರಮ ಶಾಲೆಗೂ ಹಂತ ಹಂತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವದಾಗಿ ತಿಳಿಸಿದ್ದಾರೆ.

ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿ ನೀರನ್ನು ನೀಡಬೇಕು. ಕುಡಿಯುವ ನೀರಿನ ಓವರ್‍ಹೆಡ್ ಟ್ಯಾಂಕನ್ನು 15 ದಿನಕ್ಕೊಮ್ಮೆ ಶುಚಿಗೊಳಿಸಬೇಕು. ಆವರಣದಲ್ಲಿ ನೀರು ನಿಂತು ಸೊಳ್ಳೆ ಸಂತಾನೋತ್ಪತಿ ಮಾಡದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಯಾವದೇ ರೀತಿಯ ಜ್ವರ ಕಾಣಿಸಿಕೊಂಡಲ್ಲಿ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸುವಂತೆಯೂ ಅವರು ಸೂಚನೆ ನೀಡಿದ್ದಾರೆ.

ಆಶ್ರಮ ಶಾಲಾ ಮುಖ್ಯ ಶಿಕ್ಷಕರು, ವಾರ್ಡನ್, ಶಿಕ್ಷಕರು ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳ ಶುಚಿತ್ವದ ಕಡೆ ಅಧಿಕ ಗಮನಹರಿಸಬೇಕು. ಗುಣಮಟ್ಟದ ಆಹಾರ ನೀಡಬೇಕು. ಇತ್ತೀಚೆಗೆ ಆಶ್ರಮ ಶಾಲೆಗಳಿಗೆ ಅಧಿಕ ಮಕ್ಕಳು ಗೈರು ಹಾಜರಾಗುತ್ತಿದ್ದು ಅಂತಹ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಮತ್ತೆ ವಸತಿ ಶಾಲೆಗೆ ಕರೆತರಬೇಕು ಎಂದು ವಿಜು ಸುಬ್ರಮಣಿ ಸೂಚನೆ ನೀಡಿದ್ದಾರೆ. ಪಾಕ ಶಾಲೆ ಹಾಗೂ ಮಕ್ಕಳ ಊಟದ ಕೋಣೆಯಲ್ಲಿಯೂ ಶುಚಿತ್ವ ಕಾಪಾಡಬೇಕು ಎಂದು ವಿಜು ಸುಬ್ರಮಣಿ ಎಚ್ಚರಿಸಿದ್ದಾರೆ.

- ಟಿ.ಎಲ್.ಎಸ್.