ಸೋಮವಾರಪೇಟೆ, ಮಾ. 14: ಕನ್ನಡ ನಾಡು ನುಡಿಯ ರಕ್ಷಣೆಗೆ ಕನ್ನಡಿಗರು ಮೊದಲು ಮುಂದಾಗಬೇಕು. ಆದರೆ ಇಂದು ಕನ್ನಡದ ಬೆಳವಣಿಗೆಯಲ್ಲಿ ಅನ್ಯ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿರುವದು ಕಂಡು ಬರುತ್ತಿದೆ. ಕನ್ನಡ ಭಾಷಿಕರು ಕನ್ನಡ ಮಾತನಾಡಲು ಹಿಂಜರಿಯುತ್ತಿರುವದು ದುರದೃಷ್ಟಕರ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ವಿಷಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸೋಮವಾರಪೇಟೆ ನಗರ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕನ್ನಡ ಪ್ರಬಂಧ ಮತ್ತು ಆಶುಭಾಷಣ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕನ್ನಡದ ಬಗ್ಗೆ ಪ್ರಾರಂಭದಿಂದಲೇ ಆಸಕ್ತಿ ಮೂಡಿಸುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ಹೆಚ್ಚಿನ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡಿಗರು ಭಾಷೆಯ ಮೇಲಿನ ಕೀಳರಿಮೆ ಬಿಟ್ಟು, ನಾಡು ನುಡಿಯ ಬಗ್ಗೆ ಚಿಂತನೆ ಹರಿಸಿದರೆ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ನಿರ್ದೇಶಕ ಎ.ಪಿ. ವೀರರಾಜು ಮಾತನಾಡಿ, ಶಾಲಾ ಮಕ್ಕಳಿಗೆ ಹೋಬಳಿ ಮಟ್ಟದಲ್ಲಿ ಶುದ್ಧ ಕನ್ನಡ ಭಾಷೆಯನ್ನು ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಿರುವದು ಶ್ಲಾಘನೀಯ. ಶುದ್ಧ ಕನ್ನಡವನ್ನು ಮಾತನಾಡುವದರಿಂದ ಸಂಪೂರ್ಣ ವಾಗಿ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಸಾಧ್ಯ. ನಗರ ಪ್ರದೇಶ ಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಂದಿಗೂ ಕನ್ನಡ ಭಾಷೆ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತ್ಯ ಪರಿಷತ್‍ನ ಖಜಾಂಚಿ ಡಿ.ಪಿ. ಲೋಕೇಶ್ ಮಾತನಾಡಿ, ವಿದ್ಯಾರ್ಥಿ ಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಕನ್ನಡವನ್ನು ಓದಬಾರದು. ಭಾಷೆಯ ಮೇಲೆ ಪ್ರೌಢಿಮೆ, ಕನ್ನಡ ನಾಡು, ನುಡಿ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಹೆಚ್.ಜೆ. ಜವರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಖಜಾಂಚಿ ಎಸ್.ಎ. ಮುರುಳೀಧರ್, ನಿರ್ದೇಶಕ ಅಶ್ವಥ್‍ಕುಮಾರ್, ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಅಬ್ದುಲ್ ರಬ್ಬು, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎ. ಆದಂ, ಸ್ಪರ್ಧಾ ಕಾರ್ಯಕ್ರಮದ ಸಂಚಾಲಕರಾದ ಹೆಚ್.ಹೆಚ್. ಸುಂದರ್, ಸದಾಶಿವ ಪಲ್ಲೇದ್, ಜ್ಯೋತಿ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಹೋಬಳಿ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕನ್ನಡ ಆಶುಭಾಷಣ ಸ್ಪರ್ಧೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು.