ಮಡಿಕೇರಿ, ಮಾ. 14 : ಶನಿವಾರಸಂತೆ ಗುಡುಗಳಲೆ ಹಝ್ರತ್ ಫಕೀರ್ ಷಾ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಪ್ರತೀವರ್ಷ ನಡೆಸಲಾಗುವ ಮಖಾಂ ಉರೂಸ್ ತಾ. 16ರಿಂದ 19ರವರೆಗೆ ನಡೆಯಲಿದ್ದು, ತಾ. 16ರಂದು ನೂತನ ಮದರಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಕೂಡ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗುಡುಗಳಲೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಮುಹಮ್ಮದ್ ಸುಹೈಬ್ ಫೈಝಿ ಕೊಳಕೇರಿ ಅವರು, ಶತಮಾನದ ಇತಿಹಾಸವಿರುವ ಗುಡುಗಳಲೆ ಹಝ್ರತ್ ಫಕೀರ್ ಷಾ ವಲಿಯುಲ್ಲಾಹಿ ದರ್ಗಾ, ಕೊಡಗಿನ ಪ್ರಸಿದ್ಧ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.
ರೋಗಿಗಳ ಮತ್ತು ನೊಂದವರ ಆಶಾ ಕೇಂದ್ರವೂ ಆಗಿರುವದರಿಂದ ಪ್ರತಿನಿತ್ಯ ಇಲ್ಲಿಗೆ ನೂರಾರು ಮಂದಿ ಭಕ್ತಾದಿಗಳು ಜಾತಿ, ಮತ ಭೇದವಿಲ್ಲದೆ ಆಗಮಿಸಿ ಸಾಂತ್ವನ ಪಡೆಯುತ್ತಿದ್ದಾರೆ.
ಗುಡುಗಳಲೆ ಮಖಾಂ ಷರೀಫಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ಫಕೀರ್ ಷಾ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿ ಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮಾ.16ರಿಂದ ಖ್ಯಾತ ಮತ ಪಂಡಿತರ, ಸಾದಾತ್ತುಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ಮಾ.16ರ ರಾತ್ರಿ 8 ಗಂಟೆಗೆ ನೂತನ ಮದರಸ ಕಟ್ಟಡವನ್ನು ಪಾಣಕ್ಕಾಡ್ ಸಯ್ಯಿದ್ ಹಾಷಿರ್ ಅಲಿ ಶಿಹಾಬ್ ತಂಞಳ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಹಸೈನಾರ್ ಉಸ್ತಾದ್ ವಹಿಸಲಿದ್ದು, ಮುಹಮ್ಮದ್ ಸುಹೈಬ್ ಫೈಝಿ ಅವರು ‘ಯುವತ್ವಮೇ ಒರು ನಿಮಿಷಂ’ ಎಂಬ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾ. 17ರಂದು ರಾತ್ರಿ 8 ಗಂಟೆಗೆ ಖ್ಯಾತ ವಾಗ್ಮಿ ಕೇರಳದ ಉಸ್ತಾದ್ ಉಮ್ಮರ್ ಹುದವಿ ಮಲಪ್ಪುರಂ ಅವರು ‘ಅಂತ್ಯ ದಿನದ ಸ್ಪಷ್ಟವಾದ ಮುನ್ಸೂಚನೆಗಳು’ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ. 18ರ ರಾತ್ರಿ 8ಗಂಟೆಗೆ ನಡೆಯುವ ಖತಮುಲ್ ಖುರ್‍ಆನ್ ದುಆ ಹಾಗೂ ಸ್ವಲಾತ್ ಮಜ್ಲಿಸ್‍ಗೆ ಕಾಜೂರಿನ ಮುದರ್ರಿಸ್ ಸಯ್ಯಿದ್ ಕೆ.ಪಿ.ಎಸ್. ಜಮಲುಲ್ಲೈಲಿ ತಂಙಳ್ ಅವರು ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ತಾ. 19ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಉರೂಸ್ ನೇರ್ಚೆ ಕಾರ್ಯಕ್ರಮ ನಡೆಯಲಿದ್ದು, ಪೂರ್ವಾಹ್ನ 11.30ಕ್ಕೆ ಮೌಲಿದ್ ಪಾರಾಯಣ ಮತ್ತು 12.30ರಿಂದ ಸಂಜೆ 3ಗಂಟೆವರೆಗೆ ಅನ್ನಸಂತರ್ಪಣೆ ಜರುಗಲಿದೆ ಎಂದು ಖತೀಬ್ ಮುಹಮ್ಮದ್ ಸುಹೈಬ್ ಫೈಝಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಹಸೈನಾರ್ ಉಸ್ತಾದ್, ಸದಸ್ಯರಾದ ಶೇಖಬ್ಬ ಹಾಜಿ, ಸಿ.ಎಂ. ಅಬ್ದುಲ್ಲಾ, ಅಜ್‍ಹರ್, ಗೋಪಾಲಪುರ ಅರೆಬಿಕ್ ಮದ್ರಸದ ಅಧ್ಯಾಪಕ ಅಬ್ದುಲ್ ರಜಾಕ್ ಫೈಝಿ ಹಾಜರಿದ್ದರು.