ಸೋಮವಾರಪೇಟೆ, ಮಾ. 15: ಜಿಲ್ಲೆಯಲ್ಲಿರುವ ಮೊಗೇರ ಸಮಾಜದ ಯುವ ಜನಾಂಗ ಇನ್ನಷ್ಟು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ, ಮೋಗೇರ ಸಮಾಜದ ಜಿಲ್ಲಾಧ್ಯಕ್ಷ ಬಿ. ಶಿವಪ್ಪ ಕರೆ ನೀಡಿದರು. ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮೊಗೇರ ಯುವ ವೇದಿಕೆ ರಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವದೇ ಒಂದು ಸಮಾಜ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕಾದರೆ ಶಿಕ್ಷಣ ಅಗತ್ಯ. ಯುವ ಜನಾಂಗ ಸಂಘಟಿತರಾದರೆ ಸಮಾಜಕ್ಕೆ ಹೆಚ್ಚಿನ ಶಕ್ತಿ ಲಭಿಸುತ್ತದೆ. ಆ ಮೂಲಕ ಸಾಮಾಜಿಕ, ಆರ್ಥಿಕವಾಗಿ ಬಲಗೊಳ್ಳುತ್ತದೆ. ಮೊಗೇರ ಸಮಾಜದಲ್ಲಿರುವ ತೀರಾ ಬಡವರ ಕಲ್ಯಾಣ, ಸಮಾಜಮುಖಿ ಕಾರ್ಯಗಳ ಮೂಲಕ ಮೊಗೇರ ಯುವ ವೇದಿಕೆ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗೇರ ಸಮಾಜದ ತಾಲೂಕು ಮಾಜಿ ಕಾರ್ಯದರ್ಶಿ ಪಿ.ಕೆ. ಚಂದ್ರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಖಜಾಂಚಿ ಮಂಜು, ಮಾಜಿ ತಾಲೂಕು ಅಧ್ಯಕ್ಷ ಎಂ.ಎ. ಹರೀಶ್, ಹರೀಶ್, ಜಿಲ್ಲಾ ಸಮಿತಿ ಸದಸ್ಯ ಆನಂದ್, ಕಿಬ್ಬೆಟ್ಟ ಸತೀಶ್ ಉಪಸ್ಥಿತರಿದ್ದರು.

ಮೊಗೇರ ಯುವ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಪಿ.ವಿ. ಸುರೇಶ್, ಉಪಾಧ್ಯಕ್ಷರಾಗಿ ಪಿ.ಎಂ. ರವಿ, ಗೌರವಾಧ್ಯಕ್ಷರಾಗಿ ಎಂ.ಎ. ದಿನೇಶ್, ಕಾರ್ಯದರ್ಶಿಯಾಗಿ ಶೇಷಪ್ಪ, ಉಪ ಕಾರ್ಯದರ್ಶಿಯಾಗಿ ಪಿ.ಬಿ. ದೇವರಾಜ್, ಖಜಾಂಚಿ ರಮೇಶ್, ಸಂಚಾಲಕರಾಗಿ ಮುತ್ತಪ್ಪ ಸೇರಿದಂತೆ 20 ಮಂದಿಯನ್ನು ಆಡಳಿತ ಮಂಡಳಿ ಸದಸ್ಯರುಗಳನ್ನಾಗಿ ನೇಮಿಸಲಾಯಿತು.