ಸೋಮವಾರಪೇಟೆ, ಮಾ. 15: ತಾಲೂಕಿನ ಯಡವನಾಡು ಹಾಗೂ ಅತ್ತೂರು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಶಾಸಕ ಅಪ್ಪಚ್ಚು ರಂಜನ್ ಅವರ ಅವಿರತ ಪ್ರಯತ್ನ ಹಾಗೂ ಹೋರಾಟಗಳೇ ಕಾರಣವಾಗಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸತ್ಯ ಮರೆಮಾಚುವ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್, ಯಡವನಾಡು ಮತ್ತು ಅತ್ತೂರು ಗ್ರಾಮಗಳನ್ನು ಕಂದಾಯ ಇಲಾಖಾ ವ್ಯಾಪ್ತಿಗೆ ಒಳಪಡಿಸಲು ಶಾಸಕರು 2 ದಶಕಗಳಿ ಗಿಂತಲೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಂಜನ್ ಅವರು ರಾಜ್ಯ ಅರ್ಜಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭ 15 ಸಭೆಗಳನ್ನು ನಡೆಸಿ, ಅರ್ಜಿಯನ್ನು ವಿಲೇವಾರಿ ಮಾಡಿದ್ದಾರೆ ಎಂದು ಹೇಳಿದರು.

ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರೇ ಕಂದಾಯ ಗ್ರಾಮವಾಗಲು ಕಾರಣ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರು ಹೇಳಿರುವದರಲ್ಲಿ ಅರ್ಥವಿಲ್ಲ. ಶಾಸಕರ ಪ್ರಯತ್ನದ ಫಲವಾಗಿ ಕಳೆದ 18.05.2016ರಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು,

13.07.2016ರಲ್ಲಿ ಕ್ಯಾಬಿನೆಟ್‍ನಲ್ಲಿ ಚರ್ಚೆಗೆ ಬಂದು ಇದೀಗ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದಾರೆ. ಉಸ್ತುವಾರಿ ಸಚಿವರು ಹಾರಂಗಿಗೆ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ಮನವಿ ಸಲ್ಲಿಸುವದಕ್ಕೂ ಮುನ್ನವೇ ನೋಟಿಫಿಕೇಷನ್ ಆಗಿದೆ. ಹೀಗಿದ್ದರೂ ರಮೇಶ್ ಅವರು ಉಸ್ತುವಾರಿ ಸಚಿವರಿಂದಲೇ ಇಷ್ಟೆಲ್ಲಾ ಕಾರ್ಯಗಳು ಆಗಿದೆ ಎಂದು ಹೇಳಿಕೆ ನೀಡಿರುವದು ಖಂಡನೀಯ ಎಂದರು.

ಕಾಂಗ್ರೆಸ್ ಆಯೋಜಿಸುತ್ತಿರುವ ಜನವೇದನಾ ಸಭೆಗಳು ಕಾಂಗ್ರೆಸ್ ವೇದನಾ ಸಭೆಗಳಾಗಿ ಮಾರ್ಪಟ್ಟಿವೆ. ಇಂತಹ ಒಂದು ಸಭೆಯಲ್ಲಿ ದೇಶದ ಪ್ರಧಾನಿಗಳನ್ನು ಅವಾಚ್ಯ ಶಬ್ದಗಳಿಂದ ಟಿ.ಪಿ. ರಮೇಶ್ ಅವರು ನಿಂದಿಸಿರು ವದು ಖಂಡನೀಯ. ಇಂತಹ ಮಾತುಗಳು ಮುಂದುವರೆದರೆ ಅವರ ವಿರುದ್ಧ ದೂರು ನೀಡಲಾಗುವದು. ಇಂತಹದೇ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ವಿರುದ್ಧ ಈಗಾಗಲೇ ದೂರು ದಾಖಲಿಸಲ್ಪಟ್ಟಿದ್ದು, ತಕ್ಷಣ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಸರ್ಕಾರದ ಸೌಲಭ್ಯಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿ ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅಭಿಮನ್ಯುಕುಮಾರ್, ಇದು ಮುಂದುವರೆದರೆ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವದು. ಸಿ.ಎಂ. ಇಬ್ರಾಹಿಂ ಅವರು ಕೊಡಗು ಜಿಲ್ಲೆಗೆ ಬಂದರೆ ಕಪ್ಪುಬಾವುಟ ದೊಂದಿಗೆ ಪ್ರತಿಭಟಿಸಲಾಗುವದು ಎಂದರು.

ರೈತವಿರೋಧಿ ಬಜೆಟ್: ರಾಜ್ಯ ಸರ್ಕಾರದ ಬಜೆಟ್ ರೈತವಿರೋಧಿ ಯಾಗಿದೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ. ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಫಿ, ಕಾಳು ಮೆಣಸು ಸೇರಿದಂತೆ ಯಾವದೇ ಬೆಳೆ ವಿಮೆ ರೈತರಿಗೆ ಲಭಿಸುತ್ತಿಲ್ಲ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಯುವಮೋರ್ಚಾ ಅಧ್ಯಕ್ಷ ಶರತ್‍ಚಂದ್ರ, ಪ್ರಮುಖರುಗಳಾದ ಟಿ.ಕೆ. ರಮೇಶ್, ಜೆ.ಸಿ. ಶೇಖರ್, ಸುಧಾಕರ್ ಅವರುಗಳು ಉಪಸ್ಥಿತರಿದ್ದರು.