ಸೋಮವಾರಪೇಟೆ, ಮಾ. 15: ಮುಖ್ಯಮಂತ್ರಿಗಳ ಪಟ್ಟಣ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 1.25 ಕೋಟಿ ವೆಚ್ಚದಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದ್ದರೂ ರಸ್ತೆ ಬದಿಯ ವ್ಯಾಪಾರಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ.

ಈ ಹಿಂದೆ ಕಿಷ್ಕಿಂಧೆಯಂತಿದ್ದ ಮಾರುಕಟ್ಟೆಯನ್ನು ಕೆಡವಿ ರೂ. 1.25 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದ್ದು, ನೂತನ ಮಾರುಕಟ್ಟೆಯಿಂದ ಪಟ್ಟಣದ ರಸ್ತೆ ಬದಿಯ ವ್ಯಾಪಾರಗಳು ಸ್ಥಗಿತಗೊಂಡು ಸಂಚಾರ ದಟ್ಟಣೆ ತಹಬದಿಗೆ ಬರುತ್ತದೆ ಎಂದೇ ಭಾವಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಮಾರುಕಟ್ಟೆ ಉದ್ಘಾಟನೆ ನಂತರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ನೀಡದೇ ಸಂತೆ ದಿನಗಳಂದು ಮಾರುಕಟ್ಟೆಯಲ್ಲಿಯೇ ವ್ಯಾಪಾರ ವಹಿವಾಟು ನಡೆಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಿತ್ತು. ಪಂಚಾಯಿತಿಯ ಆದೇಶ ಕೆಲ ವಾರಗಳು ಮಾತ್ರ ಪಾಲನೆಯಾದರೆ ಇದೀಗ ಪ್ರತಿ ಸೋಮವಾರ ಸಿ.ಕೆ. ಸುಬ್ಬಯ್ಯ ರಸ್ತೆಯ ವಿವಿಧೋದ್ದೇಶ ಸಹಕಾರ ಸಂಘದ ಮುಂಭಾಗದ ಎರಡೂ ಬದಿಯಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಸಂತೆ ದಿನದಂದು ಕ್ಲಬ್ ರಸ್ತೆ ಏಕಮುಖ ಸಂಚಾರವಾಗಿದ್ದು, ಪಟ್ಟಣದಿಂದ ಹೊರಹೋಗುವ ವಾಹನಗಳಿಗೆ ಮಾತ್ರ ಅವಕಾಶವಿದೆ. ಅಂತೆಯೇ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಪಟ್ಟಣದ ಒಳಭಾಗಕ್ಕೆ ಪ್ರವೇಶಿಸುವ ವಾಹನಗಳಿಗೆ ಮಾತ್ರ ಅವಕಾಶವಿದೆ.

ಇದರಿಂದಾಗಿ ಸಿ.ಕೆ. ಸುಬ್ಬಯ್ಯ ರಸ್ತೆಯ ಮೂಲಕವೇ ಲಘು ವಾಹನಗಳಿಂದ ಹಿಡಿದು ಭಾರೀ ವಾಹನಗಳು, ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ಗಳು, ಗ್ರಾಮೀಣ ಭಾಗದಿಂದ ಆಗಮಿಸುವ ಸಾವಿರಾರು ವಾಹನಗಳು, ಪ್ರಯಾಣಿಕರನ್ನು ಬಾಡಿಗೆ ಕರೆದೊಯ್ಯುವ ನೂರಾರು ಆಟೋಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಿದೆ. ಸಂತೆ ದಿನದಂದು ಮಾರುಕಟ್ಟೆ ಪ್ರವೇಶಕ್ಕೂ ಇದೇ ಪ್ರಮುಖ ರಸ್ತೆಯಾಗಿದ್ದು, ಸಹಜವಾಗಿ ಜನದಟ್ಟಣೆ ಅಧಿಕವಿರುತ್ತದೆ. ರಸ್ತೆ ಬದಿಯ ವ್ಯಾಪಾರವನ್ನು ನಿಷೇಧಿಸಿ ಮಾರುಕಟ್ಟೆಯ ಒಳಭಾಗದಲ್ಲಿಯೇ ಅವಕಾಶ ಕಲ್ಪಿಸಬೇಕೆಂದು ನಗರದ ನಿವಾಸಿಗಳಾದ ನಾಗೇಶ್, ರವಿಕುಮಾರ್, ಮಹೇಶ್ ಸೇರಿದಂತೆ ಅನೇಕರು ಪತ್ರಿಕೆಯೊಂದಿಗೆ ಒತ್ತಾಯಿಸಿದ್ದಾರೆ.

ಮುಂದಿನ ಸಂತೆ ದಿನದಂದು ಎಂದಿನ ಸಮಸ್ಯೆ ಕಂಡುಬರುತ್ತದೆಯೋ ಅಥವಾ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳುತ್ತದೆಯೋ ಎಂಬದನ್ನು ಕಾದುನೋಡಬೇಕಿದೆ. - ವಿಜಯ್