ಮಡಿಕೇರಿ, ಮಾ. 15: ಕನ್ನಡ ಭಾಷೆ ಮಾತನಾಡುವಾಗ ಆಂಗ್ಲ ಪದಗಳನ್ನು ಬಳಸದೆ ಶುದ್ಧ ಕನ್ನಡದಲ್ಲೇ ವ್ಯವಹರಿಸುವಂತೆ ಹಿರಿಯ ಸಾಹಿತಿ ಜಿ. ಟಿ. ರಾಘವೇಂದ್ರ ಕರೆ ನೀಡಿದರು.

ಕೊಡಗು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಶುದ್ಧ ಬರಹ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇಂದು ಕನ್ನಡದ ಮೇಲೆ ಪರಭಾಷೆ ಹಾವಳಿ ಹೆಚ್ಚಾಗಿದೆ. ನಾವು ವ್ಯವಹರಿಸುವಾಗ ಕೂಡಾ ಆಂಗ್ಲ ಭಾಷೆಯನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ನಾವು ಮಾತನಾಡುವ ಭಾಷೆಯನ್ನು ಶುದ್ಧವಾಗಿ ಬಳಸಿದರೆ ಮಾತ್ರ ಭಾಷೆ ಬೆಳವಣಿಗೆ ಸಾಧ್ಯ ಎಂದರು. ಎಲ್ಲ ಭಾಷೆಗಳಿಗಿಂತ ಕನ್ನಡ ಸುಲಲಿತ, ಶ್ರೀಮಂತಿ ಭಾಷೆಯಾಗಿದೆ ಎಂದ ಅವರು, ಕನ್ನಡದ ಬೆಳವಣಿಗೆಗೆ ಕನ್ನಡೇತರರ ಕೊಡುಗೆ ಸಾಕಷ್ಷಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಶುದ್ಧ ಬರಹ ಸ್ಪರ್ಧೆ ಆಯೋಜಿಸಲಾಗಿದೆ. ಕನ್ನಡದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಸಾಪ ಈ ಕಾರ್ಯಕ್ಕೆ ಮುಂದಾಗಿದೆ. ಹೋಬಳಿ ಹಾಗೂ ತಾಲೂಕು ಮಟ್ಟದ ಸ್ಪರ್ಧೆ ಮುಗಿದಿದೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಗು ವದೆಂದು ಮಾಹಿತಿ ನೀಡಿದರು.

ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಶುದ್ಧ ಬರಹವನ್ನು ವಿದ್ಯಾರ್ಥಿಗಳು ಸ್ಪರ್ಧೆಗೆ ಮಾತ್ರ ಸೀಮಿತಗೊಳಿ ಸಬಾರದು. ಜೀವನದಲ್ಲಿ ಕೂಡಾ ಮುಂದುವರೆಸಿಕೊಂಡು ಹೋದರೆ ಅದೇ ದಾರಿ ದೀಪವಾಗಲಿದೆ. ಯಾವದೇ ಸಾಹಿತ್ಯಪರ ಚಟುವಟಿಕೆ ಗಳಿದ್ದಲ್ಲಿ ಭಾವಹಿಸಿ ಜ್ಞಾನವನ್ನು ವೃದ್ಧಿಸಿಕೊಳ್ಳುವಂತೆ ಕರೆ ನೀಡಿದರು.

ಹೋಬಳಿ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಆನಂದಿ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಿ.ಎಚ್. ಪುಷ್ಪ ಸ್ವಾಗತಿಸಿದರೆ, ಎಸ್.ಡಿ. ಅನಿತಾ ನಿರೂಪಿಸಿದರು