ಕುಶಾಲನಗರ, ಮಾ. 14: ಆರ್ಯವೈಶ್ಯ ಜನಾಂಗದವರಿಗೆ ಜಾತಿ ಪ್ರಮಾಣಪತ್ರ ಒದಗಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಆರ್ಯವೈಶ್ಯ ಜನಾಂಗದ ಪ್ರಮುಖರು ಜನಾಂಗದ ಹೆಸರನ್ನು ರಾಜ್ಯದ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಮನವಿ ಸಲ್ಲಿಸಿದ ಸಂದರ್ಭ ಅವರು ಮಾತನಾಡಿ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ಯವೈಶ್ಯ ಜನಾಂಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗ ಸಂದರ್ಭ ಹಾಗೂ ಸರಕಾರದ ಯೋಜನೆಗಳಿಗೆ ಸಂಬಂಧಪಟ್ಟಂತೆ ಜಾತಿ ಪ್ರಮಾಣ ಪತ್ರ ಸಲ್ಲಿಸುವದು ಅನಿವಾರ್ಯ. ಆದರೆ ಕರ್ನಾಟಕ ಸರಕಾರದ ಜಾತಿಗಳ ಪಟ್ಟಿಯಲ್ಲಿ ಆರ್ಯವೈಶ್ಯ ಎಂಬ ಉಲ್ಲೇಖವಿಲ್ಲದಿ ರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಹಿಂದೆ ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನ ವಾಗಿರುವದಿಲ್ಲ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ಬೇಡಿಕೆಯನ್ನು ಈಡೇರಿಸಿ ಸಮುದಾಯದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಕೊಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಪ್ರಮುಖರಾದ ಎಸ್.ಎನ್. ನರಸಿಂಹ ಮೂರ್ತಿ, ಬಿ.ಎಲ್. ಸತ್ಯನಾರಾಯಣ, ಅಮೃತ್‍ರಾಜ್, ಸ್ಥಳೀಯ ಆರ್ಯವೈಶ್ಯ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ ಹಾಗೂ ವಾಸವಿ ಯುವತಿಯರ ಸಂಘದ ಪ್ರಮುಖರು ಇದ್ದರು.
ಈ ಸಂದರ್ಭ ಆರ್ಯ ವೈಶ್ಯ ಮಹಾಸಭಾದ ಪ್ರಮುಖರು ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿ ರಾಜ್ಯ ಜಾತಿ ಪಟ್ಟಿಯಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದರು.