ಮಡಿಕೇರಿ, ಮಾ. 14: ಬೆಳಿಗ್ಗೆ 6 ಗಂಟೆಗೆ ಮಡಿಕೇರಿ ಸಾಯಿ ಮೈದಾನ ಮುಂಭಾಗದಲ್ಲಿ ಹೆಂಗಸರು ಮಕ್ಕಳು ಸಹಿತ ಹಲವು ಕುಟುಂಬ ಗಳು ಆತಂಕದಲ್ಲಿ ಓಡಾಡುತ್ತಿದ್ದವು.
ರಾತ್ರಿ ಮಲಗಲು ಅಳವಡಿಸಿದ್ದ ಪ್ಲಾಸ್ಟಿಕ್ ಚೀಲದ ಮನೆಗಳು ಮಡಚಲ್ಪಟ್ಟಿದ್ದವು. ಪುಟ್ಟ ಮಕ್ಕಳ ಹಸಿವಿಗಾಗಿ ಕೆಲ ತಾಯಂದಿರು ಒಲೆ ಉರಿಸಿ ಅಡುಗೆ ತಯಾರು ಮಾಡುತ್ತಿದ್ದರೆ, ಗಂಡಸರು ಮನೆ ಸಾಮಾನುಗಳನ್ನು ಖಾಲಿ ಮಾಡಿ ಪಕ್ಕದ ಸೇತುವೆಯ ಒತ್ತಿಗೆ ಕೂಡಿಡುತ್ತಿದ್ದರು. ನಿದ್ರೆಯಲ್ಲಿದ್ದ ಮಕ್ಕಳನ್ನೂ ಬಡಿದೆಬ್ಬಿಸಿ ಜಾಗ ಖಾಲಿ ಮಾಡಲು ಮನೆಯವರು ತಯಾರಿ ನಡೆಸಿದ್ದರು.
6.30ರ ವೇಳೆಗೆ ದೌಡಾಯಿಸಿದ ನಗರಸಭೆಯ ಜೆಸಿಬಿಯ ಶಬ್ದಕ್ಕೇ ಹಲವರು ಬೆಚ್ಚಿ ಕಿರುಚಲಾರಂಭಿಸಿದರು. ಖಾಲಿ ಇದ್ದ ಜಾಗವೊಂದನ್ನು ಸಮತಟ್ಟು ಮಾಡಿದ ಜೆಸಿಬಿ ಬದಿಗೆ ಸರಿದು ಸ್ವಲ್ಪ ಕಾಲಾವಕಾಶವನ್ನೂ ನೀಡಿತು! ಬದುಕಿದೆಯಾ ಬಡಜೀವ ಎಂದುಕೊಂಡ ಕನಿಷ್ಟ ಹತ್ತು ಕುಟುಂಬಗಳು ಅಲ್ಲಿಂದ ಕಾಲ್ಕಿತ್ತವು.
ಹಲವು ದಶಕಗಳಿಂದ ವರ್ಷದ 9 ತಿಂಗಳೂ ಮಡಿಕೇರಿಯಲ್ಲಿ ಪ್ಲಾಸ್ಟಿಕ್ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ ಮಣ್ಣು ಕೆಲಸ ಮಾಡುವ ಕುಟುಂಬ ಕಳೆದ 3 ವರ್ಷಗಳಿಂದ ಇದೀಗ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣ ಜಾಗದಲ್ಲಿ ಆಶ್ರಯ ಪಡೆದಿದ್ದವು. ಹೊಸ ಕಾಮಗಾರಿ ಆರಂಭವಾದ ಬಳಿಕ ಜಾಗವಿಲ್ಲದೆ ಸಾಯಿ ಮೈದಾನದ ಎದುರು ತೋಡಿನ ಪಕ್ಕ ಈ ಕುಟುಂಬಗಳು ಗುಳೆ ಬಂದಿದ್ದವು.
ಪೊಲೀಸ್ ಅಧಿಕಾರಿಯೊಬ್ಬರಿಗೆ ಇವರ ಇರುವಿಕೆ ಕಿರಿಕಿರಿ ಎನಿಸಿ ನಗರಸಭಾ ಕಮಿಷನರ್ಗೆ ಇವರನ್ನು ತೆರವುಗೊಳಿಸುವಂತೆ ಸೂಚಿಸಿದರು.
ನಿನ್ನೆ ಸಂಜೆ ಜಾಗಕ್ಕೆ ಆಗಮಿಸಿದ ‘ಆಪರೇಷನ್ ಒಡ್ಡಾಸ್’ ತಂಡ ಬೆಳಿಗ್ಗೆ 5 ಗಂಟೆಯೊಳಗೆ ಜಾಗ ಬಿಟ್ಟು ತೆರಳುವಂತೆ ಆದೇಶಿಸಿತು.
ಅಧಿಕಾರಿಗಳ ಆದೇಶ ಪಾಲಿಸಿದ ಸಿಬ್ಬಂದಿ ಜೆಸಿಬಿ ಸಹಿತ ಬೆಳಿಗ್ಗೆ ಬಂದರು.
ಬಡಪಾಯಿಗಳು ಬೆದರಿ ಅಲ್ಲಿಂದ ಕಾಲ್ಕಿತ್ತರು.
-ಅಪೂರ್ವ