ಮಡಿಕೇರಿ, ಮಾ. 14 : ಪೊನ್ನಂಪೇಟೆ ಕುಂದ ರಸ್ತೆಯ ಸೀತಾ ಕಾಲೋನಿಯಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಸ ವಿಲೇವಾರಿ ಘಟಕವನ್ನು ಶಾಸಕ ಕೆ.ಜಿ. ಬೋಪಯ್ಯ ಲೋಕಾರ್ಪಣೆಗೊಳಿಸಿದರು.
ಗೋಣಿಕೊಪ್ಪ, ಪೊನ್ನಂಪೇಟೆ, ಅರುವತ್ತೋಕ್ಲು ಪಂಚಾಯಿತಿಗಳ ಜಂಟಿ ಆಶ್ರಯದಲ್ಲಿ ಕಸ ವಿಲೇವಾರಿಗೊಳಿಸಲು ಅರುವತ್ತೋಕ್ಲು ಗ್ರಾ.ಪಂ. ಅಧೀನದ ಸೀತಾ ಕಾಲೋನಿ ಸ್ಥಳವನ್ನು ಹಲವು ವರ್ಷಗಳ ಹಿಂದೆಯೇ ಗುರುತಿಸಲಾಗಿತ್ತು. ಆದರೆ ಕೆಲವು ಲೋಪದೋಷಗಳು ರಾಜಕೀಯ ಮೇಲಾಟದಿಂದ ಕಾಮಗಾರಿ ಪ್ರಗತಿ ಕಾಣಲಿಲ್ಲ. ಇದೀಗ ಸ್ಥಳದಲ್ಲಿ ನೂತನ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವ ಮೂಲಕ ಪಂಚಾಯಿತಿಗೆ ಶಾಪವೆಂದೇ ಹೇಳಬಹುದಾದ ಸಮಸ್ಯೆ ಬಗೆಹರಿಯ ಬಹುದಾದ ನಿರೀಕ್ಷೆ ಹೊಂದಲಾಗಿದೆ.
ಶಾಸಕರ ಮುಂದಾಳತ್ವದಲ್ಲಿ ಜಿ.ಪಂ. ಸದಸ್ಯರುಗಳು, ತಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು, ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಘಟಕಕ್ಕೆ ಚಾಲನೆ ನೀಡಲಾಗಿದೆ.
ಅರುವತ್ತೋಕ್ಲು ಪಂಚಾಯಿತಿ 9.75 ಲಕ್ಷ ಗೋಣಿಕೊಪ್ಪ ಪಂಚಾಯಿತಿ 14.30 ಲಕ್ಷ ಮತ್ತು ಪೊನ್ನಂಪೇಟೆ ಪಂಚಾಯಿತಿ 25.50 ಲಕ್ಷದ ವೆಚ್ಚದಲ್ಲಿ ವಿವಿಧ ಅನುದಾನ ಗಳಲ್ಲಿ ಅಂದಾಜು 50 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಾಣ ಕಾಮಗಾರಿ ನಡೆದಿದೆ. ನಿರ್ವಹಣೆ ಯನ್ನು ಮೂರು ಪಂಚಾಯಿತಿಗಳು ವಹಿಸಿಕೊಂಡಿದೆ. ಒಟ್ಟಿನಲ್ಲಿ ಮೂರು ಪಂಚಾಯಿತಿಯ ಕಸ ವಿಲೇವಾರಿ ಸಮಸ್ಯೆ ಈ ಮೂಲಕ ಬಗೆಹರಿಯಲಿದೆ.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಸ ವಿಲೇವಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸದಂತೆ ನಿಯಮ ಪಾಲಿಸಬೇಕು. ಮೂರು ಪಂಚಾಯಿತಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಜಿ.ಪಂ. ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಶ್ರೀಜಾ ಸಾಜಿ, ಅಪ್ಪಡೇರಂಡ ಭವ್ಯ, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸದಸ್ಯರುಗಳಾದ ಆಶಾ ಪೂಣಚ್ಚ, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್, ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷರಾದ ಸೆಲ್ವಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೆರ ಸುಮಿತಾ ಗಣೇಶ್, ಗೋಣಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ರತಿ ಅಚ್ಚಪ್ಪ, ಬಿ.ಎನ್. ಪ್ರಕಾಶ್, ಸುರೇಶ್ ರೈ, ಪಿ.ಡಿ.ಒ ಚಂದ್ರಮೌಳಿ, ಪೊನ್ನಂಪೇಟೆ ಗ್ರಾ.ಪಂ. ಸದಸ್ಯರುಗಳಾದ ಜಯಲಕ್ಷ್ಮಿ, ಸುರೇಶ್, ಸುಮಂತ್, ಅರುವತ್ತೋಕ್ಲು ಗ್ರಾ.ಪಂ. ಸದಸ್ಯೆ ರೇವತಿ ಹಾಜರಿದ್ದರು.